ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ದಳಪತಿ ವಿಜಯ್ (Vijay)ಅವರ ತಮಿಳಿಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಈಗ ಮಹತ್ವದ ಸವಾಲು ಎದುರಾಗಿದೆ. ಮೇ 7ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ ಎಂಬ ರಾಜಕೀಯ ವಲಯದ ಮಾಹಿತಿಗಳು ಹೊರಬರುತ್ತಿವೆ.
ಈ ಬೆಳವಣಿಗೆಯ ಕೇಂದ್ರಬಿಂದುವಾಗಿ ತಮಿಳುನಾಡಿನ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ನಿಲುವು ಕಾಣಿಸುತ್ತಿದೆ. ಸರ್ಕಾರ ರಚನೆಗೆ ಅಗತ್ಯವಿರುವ ಬಹುಮತದ ಬೆಂಬಲವನ್ನು ವಿಜಯ್ ಸಮರ್ಪಕವಾಗಿ ತೋರಿಸಿರುವಾರೆಯೇ ಎಂಬುದರ ಬಗ್ಗೆ ರಾಜ್ಯಪಾಲರಿಗೆ ಇನ್ನೂ ಪೂರ್ಣ ವಿಶ್ವಾಸ ಮೂಡಿಲ್ಲ ಎನ್ನಲಾಗುತ್ತಿದೆ.
ಬಹುಮತದ ಲೆಕ್ಕಾಚಾರವೇ ಮುಖ್ಯ ಅಡ್ಡಿ
ಸರ್ಕಾರ ರಚಿಸಲು ಅಗತ್ಯವಾದ “ಮ್ಯಾಜಿಕ್ ನಂಬರ್” ತಲುಪಿದ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಪ್ರಮುಖ ಸಮಸ್ಯೆಯಾಗಿದೆ. ವಿಜಯ್ ಅವರು ಸುಮಾರು 108 ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದರೂ, ಅಧಿಕೃತವಾಗಿ ಇದು ದೃಢಪಡಬೇಕಿದೆ. ತಮಿಳುನಾಡು ವಿಧಾನಸಭೆಯಲ್ಲಿ ಬಹುಮತಕ್ಕೆ 118 ಸದಸ್ಯರ ಬೆಂಬಲ ಅಗತ್ಯವಿದ್ದು, ಈ ಸಂಖ್ಯೆಯನ್ನು ತಲುಪಲು ಇನ್ನೂ ಕೊರತೆ ಇರುವುದಾಗಿ ವಿಶ್ಲೇಷಕರು ಸೂಚಿಸುತ್ತಿದ್ದಾರೆ.
ಇದಲ್ಲದೆ, ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ಹಿನ್ನೆಲೆ, ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇದರಿಂದ ಅವರ ಬಲ ಮತ್ತಷ್ಟು ಕುಗ್ಗುವ ಸಾಧ್ಯತೆ ಇದೆ ಎಂಬ ಅಂಶವೂ ಗಮನಾರ್ಹವಾಗಿದೆ.
ಇದನ್ನೂ ಓದಿ: ವಿಜಯ್ ಗೆ ಶಾಕ್! ಡಿಎಂಕೆ-ಎಐಎಡಿಎಂಕೆ ಮೈತ್ರಿ ತಮಿಳುನಾಡಿನಲ್ಲಿ ಸರ್ಕಾರ ರಚನೆ ಸಾಧ್ಯತೆ
ಸಂವಿಧಾನಾತ್ಮಕ ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ರಾಜ್ಯಪಾಲರ ಆದ್ಯತೆಯಾಗಿದ್ದು, ಕೇವಲ ಹೇಳಿಕೆಗಳ ಆಧಾರದ ಮೇಲೆ ಸರ್ಕಾರ ರಚನೆಗೆ ಅವಕಾಶ ನೀಡಲು ಅವರು ಸಿದ್ಧರಿಲ್ಲ ಎನ್ನಲಾಗಿದೆ. ಬಹುಮತವನ್ನು ಅಧಿಕೃತವಾಗಿ ಸಾಬೀತುಪಡಿಸುವುದಕ್ಕೆ ಅವರು ಒತ್ತಾಯಿಸುತ್ತಿದ್ದಾರೆ.
ಮೇ 7ರಂದು ನಡೆಯಬೇಕಿದ್ದ ಪ್ರಮಾಣವಚನ ಕಾರ್ಯಕ್ರಮದ ಬಗ್ಗೆ ಈಗ ಅನುಮಾನಗಳು ಗಟ್ಟಿಯಾಗುತ್ತಿವೆ. ರಾಜಭವನದಿಂದ ಇನ್ನೂ ಅಧಿಕೃತ ಅನುಮತಿ ಸಿಗದಿರುವುದರಿಂದ ಕಾರ್ಯಕ್ರಮ ಮುಂದೂಡಲ್ಪಡುವ ಸಾಧ್ಯತೆ ಇದೆ.
ಈ ಬೆಳವಣಿಗೆಗಳ ನಡುವೆ, ತಮಿಳುನಾಡಿನ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗಳು ನಡೆಯುತ್ತಿವೆ. ರಾಜ್ಯಪಾಲರ ಅಂತಿಮ ನಿರ್ಧಾರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಶ್ರೀ ರಾಮ ಅವರು ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ, ಟ್ರೆಂಡಿಂಗ್ ಕಥೆಗಳು ಹಾಗೂ ಅವುಗಳ ವಿಶ್ಲೇಷಣೆಯನ್ನು ನಿಖರವಾಗಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ಪರಿಣತಿ ಇದೆ. ರಾಜಕೀಯ ಸೇರಿದಂತೆ ಹಲವು ವಿಷಯಗಳಿಂದ ಸುದ್ದಿ ಸಂಗ್ರಹಣೆ, ವರದಿಗಾರಿಕೆ ಮತ್ತು ಸಂದರ್ಶನಗಳಲ್ಲಿ ಶ್ರೀ ರಾಮ ಉತ್ತಮ ನೈಪುಣ್ಯ ಪ್ರದರ್ಶಿಸಿದ್ದಾರೆ.
