ಜ್ಯೋತಿಷ್ಯ ಶಾಸ್ತ್ರದಲ್ಲಿ ಸಂಪತ್ತು, ವೈಭವ, ಪ್ರೀತಿ ಹಾಗೂ ಭೌತಿಕ ಸೌಕರ್ಯಗಳ ಕಾರಕ ಗ್ರಹವೆಂದು ಪರಿಗಣಿತವಾಗಿರುವ ಶುಕ್ರನು ಅಕ್ಟೋಬರ್ 14ರಂದು ತನ್ನ ಸ್ವಕ್ಷೇತ್ರವಾದ ತುಲಾ ರಾಶಿಯಲ್ಲಿ ಅಸ್ತಂಗತನಾಗಲಿದ್ದಾನೆ. ಸಾಮಾನ್ಯವಾಗಿ ಗ್ರಹಗಳ ಅಸ್ತಂಗತ ಸ್ಥಿತಿಯನ್ನು ಮಂದಗತಿಯ ಅವಧಿ ಎಂದು ಭಾವಿಸಲಾಗುತ್ತದೆಯಾದರೂ, ಈ ಬಾರಿ ಶುಕ್ರನ ಈ ಚಲನೆಯು ಕೆಲವು ರಾಶಿಗಳ ಜಾತಕದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಪ್ರಮುಖವಾಗಿ ಈ ಕೆಳಗಿನ ಐದು ರಾಶಿಗಳ ವೃತ್ತಿಜೀವನ, ಉದ್ಯಮ ಹಾಗೂ ಆರ್ಥಿಕ ಸ್ಥಿತಿಯಲ್ಲಿ ‘ಶುಕ್ರದೆಸೆ’ಯ ಸುವರ್ಣ ಕಾಲ ಆರಂಭವಾಗಲಿದೆ.
ಮಿಥುನ ರಾಶಿ: ವಾಕ್ಚಾತುರ್ಯ ಹಾಗೂ ಸೃಜನಶೀಲ ಚಿಂತನೆಗಳ ಮೂಲಕ ನೀವು ಅಂದುಕೊಂಡ ಗುರಿಗಳನ್ನು ಸುಲಭವಾಗಿ ತಲುಪಲಿದ್ದೀರಿ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳು ಮತ್ತೆ ಹೊಸ ಚೈತನ್ಯದೊಂದಿಗೆ ಚಾಲನೆ ಪಡೆಯಲಿವೆ. ವಿಶೇಷವಾಗಿ ಮಾಧ್ಯಮ, ಕಲೆ, ಜಾಹೀರಾತು ಮತ್ತು ಮಾರುಕಟ್ಟೆ (ಮಾರ್ಕೆಟಿಂಗ್) ಕ್ಷೇತ್ರದಲ್ಲಿರುವವರಿಗೆ ಉತ್ತಮ ಆದಾಯ ಹರಿದುಬರಲಿದೆ. ಆದಾಗ್ಯೂ, ಆರ್ಥಿಕ ವಹಿವಾಟು ನಡೆಸುವಾಗ ಆತುರಕ್ಕೆ ಬೀಳದೆ ವಿವೇಚನೆಯಿಂದ ವ್ಯವಹರಿಸುವುದು ಒಳಿತು.
ತುಲಾ ರಾಶಿ: ಶುಕ್ರನು ತುಲಾ ರಾಶಿಯ ಅಧಿಪತಿಯೇ ಆಗಿರುವುದರಿಂದ ಈ ಸ್ಥಿತ್ಯಂತರವು ನಿಮ್ಮ ಜಾತಕದಲ್ಲಿ ವಿಶೇಷ ಪ್ರಭಾವ ಬೀರಲಿದೆ. ನಿಮ್ಮ ಕಾರ್ಯವೈಖರಿ ಹಾಗೂ ವ್ಯಕ್ತಿತ್ವಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಲಿದೆ. ವೃತ್ತಿಯಲ್ಲಿ ಪದೋನ್ನತಿ ಅಥವಾ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ವ್ಯಾಪಾರಿಗಳಿಗೆ ಹೊಸ ಗ್ರಾಹಕರ ಸಂಪರ್ಕ ದೊರೆತು ಉದ್ಯಮ ವಿಸ್ತರಣೆಯಾಗಲಿದೆ. ಆದರೆ, ಭಾರಿ ಪ್ರಮಾಣದ ಹಣವನ್ನು ಒಂದೇ ಕಡೆ ಹೂಡಿಕೆ ಮಾಡುವ ಮುನ್ನ ಅನುಭವಿಗಳ ಸಲಹೆ ಪಡೆಯುವುದು ಉತ್ತಮ.
ಇದನ್ನೂ ಓದಿ: 12 ವರ್ಷಗಳ ಬಳಿಕ ಸಿಂಹ ರಾಶಿಯಲ್ಲಿ ರಾಜಮೋಕ್ಷ ಯೋಗ! ರಾತ್ರೋರಾತ್ರಿ ಅದೃಷ್ಟ ಬದಲಾಯಿಸಿಕೊಳ್ಳಲಿವೆ ಈ 5 ರಾಶಿಗಳು!
ಮೇಷ ರಾಶಿ: ಉದ್ಯೋಗ ಹಾಗೂ ಪಾಲುದಾರಿಕೆ ಉದ್ಯಮಗಳಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲು ಇದು ಸಕ್ತ ಸಮಯ. ವೃತ್ತಿಕ್ಷೇತ್ರದಲ್ಲಿ ನಿಮ್ಮ ದಕ್ಷತೆ ಮತ್ತು ನಾಯಕತ್ವ ಗುಣಗಳಿಗೆ ಸೂಕ್ತ ಮನ್ನಣೆ ದೊರೆಯಲಿದ್ದು, ಹಿರಿಯ ಅಧಿಕಾರಿಗಳಿಂದ ಸಂಪೂರ್ಣ ಪ್ರೋತ್ಸಾಹ ಸಿಗಲಿದೆ. ವ್ಯಾಪಾರಸ್ಥರಿಗೆ ಲಾಭದಾಯಕ ಒಪ್ಪಂದಗಳು ಕೈಸೇರಲಿವೆ. ಆದರೆ, ಹೊಸ ಕರಾರುಗಳಿಗೆ ಸಹಿ ಮಾಡುವ ಮುನ್ನ ಸೂಕ್ತ ಕಾನೂನು ಸಲಹೆ ಹಾಗೂ ದಾಖಲೆಗಳ ಪರಿಶೀಲನೆ ಅಗತ್ಯ.
ಮಕರ ರಾಶಿ: ನಿಮ್ಮ ನಿರಂತರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಹಾಗೂ ವೃತ್ತಿಪರ ಮನ್ನಣೆ ದೊರೆಯುವ ಕಾಲ ಸನ್ನಿಹಿತವಾಗಿದೆ. ಹಳೆಯ ಉದ್ಯೋಗ ಸಂಬಂಧಗಳು ಹಾಗೂ ಔದ್ಯೋಗಿಕ ಸಂಪರ್ಕಗಳು ನಿಮ್ಮ ವ್ಯಾಪಾರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿವೆ. ಸಂಸ್ಥೆಯಲ್ಲಿ ಬಡ್ತಿಯ ಜೊತೆಗೆ ಸ್ಥಾನಮಾನ ಹೆಚ್ಚಾಗುವ ಎಲ್ಲಾ ಲಕ್ಷಣಗಳಿವೆ. ಆದಾಗ್ಯೂ, ಯಾವುದೇ ದೀರ್ಘಕಾಲೀನ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳುವಾಗ ಸಾಧಕ-ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಕ್ಷೇಮ.
ಕುಂಭ ರಾಶಿ: ಅದೃಷ್ಟ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಈ ಸಮಯವು ಅತ್ಯಂತ ಫಲದಾಯಕವಾಗಿದೆ. ನೂತನ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದ್ದು, ಸದ್ಯದ ಕೆಲಸದಲ್ಲಿ ಬಡ್ತಿ ಅಥವಾ ವೇತನ ಏರಿಕೆಯ ಸಾಧ್ಯತೆಗಳಿವೆ. ದೂರದ ಊರುಗಳು ಅಥವಾ ವಿದೇಶಿ ಸಂಸ್ಥೆಗಳೊಂದಿಗಿನ ವ್ಯವಹಾರಗಳಿಂದ ಭಾರಿ ಧನಲಾಭವಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಗಣನೀಯವಾಗಿ ಸುಧಾರಿಸಲಿದ್ದು, ಕುಟುಂಬದಲ್ಲಿ ನೆಮ್ಮದಿ ನೆಲೆಸಲಿದೆ.
ಆರಾಧ್ಯ ಅವರು ಐದು ವರ್ಷಗಳಿಂದ ಜ್ಯೋತಿಷ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅನುಭವ ಹೊಂದಿರುವ ಕಂಟೆಂಟ್ ರೈಟರ್. ಜ್ಯೋತಿಷ್ಯ ವಿಷಯಗಳನ್ನು ಆಧಾರಿತ ಮಾಹಿತಿಯೊಂದಿಗೆ ಸಂಶೋಧಿಸಿ, ಸರಳ ಮತ್ತು ನಿಖರ ರೀತಿಯಲ್ಲಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ನೈಪುಣ್ಯ ಇದೆ. ವಿಶ್ವಾಸಾರ್ಹ ಮತ್ತು ಉಪಯುಕ್ತ ಮಾಹಿತಿಯನ್ನು ನೀಡುವುದು ಅವರ ಬರವಣಿಗೆಯ ಮೂಲ ಸಿದ್ಧಾಂತ.
