
ಪತಿ-ಪತ್ನಿ ಸಂಬಂಧವೆಂದರೆ ನಂಬಿಕೆ, ಪ್ರೀತಿ ಮತ್ತು ತ್ಯಾಗದ ಪ್ರತೀಕ. ಇತ್ತೀಚಿನ ದಿನಗಳಲ್ಲಿ ಪತಿ ಅಥವಾ ಪತ್ನಿಯರು ಪರಸ್ಪರ ಹತ್ಯೆ ಮಾಡುವಂತಹ ಆಘಾತಕಾರಿ ಘಟನೆಗಳು ಹೆಚ್ಚಾಗುತ್ತಿರುವುದನ್ನು ನೋಡಿದಾಗ, ಮದುವೆಯೆಂದರೆ ಭಯಪಡುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಈ ಪ್ರಪಂಚದಲ್ಲಿ ನಿಜವಾದ ಪ್ರೀತಿ, ನಿಷ್ಠೆ ಮತ್ತು ತ್ಯಾಗವನ್ನು ಪ್ರತಿಬಿಂಬಿಸುವ ಹಲವು ಸಂಗತಿಗಳು ನಡೆಯುತ್ತಿರುತ್ತವೆ. ಪತಿಯೇ ಪರದೈವ ಎಂದು ಬದುಕುವ, ಪತಿಗಾಗಿ ಕಿಡ್ನಿ ದಾನ ಮಾಡುವ, ಅಥವಾ ಪತಿಯ ಕಷ್ಟದಲ್ಲಿ ತನ್ನನ್ನು ತಾನು ಅರ್ಪಿಸಿಕೊಳ್ಳುವ ಸಂಭಾವಿತ ಪತ್ನಿಯರು ಇದ್ದಾರೆ ಎಂಬುದಕ್ಕೆ ಇದೀಗ ಉತ್ತರ ಭಾರತದ ಒಂದು ಘಟನೆ ಸಾಕ್ಷಿಯಾಗಿದೆ. ಯುವಕರೇ, ಇಂತಹ ಹೆಣ್ಮಕ್ಕಳು ಇದ್ದಾರೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು!
ಪ್ರಸ್ತುತ ಉತ್ತರ ಭಾರತದಲ್ಲಿ ಶ್ರಾವಣ (ಸಾವನ್) ಮಾಸದ ನಿಮಿತ್ತ ಕನ್ವರ್ ಯಾತ್ರೆ ಬಹಳ ಜೋರಾಗಿ ಸಾಗುತ್ತಿದೆ. ಶಿವಭಕ್ತರು ಪಾದಯಾತ್ರೆಯ ಮೂಲಕ ಹರಿದ್ವಾರ, ಗಂಗೋತ್ರಿ ಮುಂತಾದ ಪುಣ್ಯ ಕ್ಷೇತ್ರಗಳಿಂದ ಗಂಗೆಯನ್ನು ಬಿಂದಿಗೆಯಲ್ಲಿ ತುಂಬಿ ತಂದು ಶಿವನಿಗೆ ಅಭಿಷೇಕ ಮಾಡುತ್ತಾರೆ. ಲಕ್ಷಾಂತರ ಭಕ್ತರು ಈ ಯಾತ್ರೆಯಲ್ಲಿ ಭಾಗಿಯಾಗುತ್ತಿದ್ದಾರೆ. ಆದರೆ, ಈ ಲಕ್ಷಾಂತರ ಭಕ್ತರ ನಡುವೆ, ಆಶಾ ಎಂಬ ಮಹಿಳೆಯ ಕಥೆ ಎಲ್ಲರ ಕಣ್ಮನ ಸೆಳೆದಿದೆ, ಹೃದಯಗಳನ್ನು ಕಲಕಿದೆ.
ಉತ್ತರ ಪ್ರದೇಶದ ಮುಜಾಫರ್ಪುರ ನಗರದವರಾದ ಆಶಾ, ತಮ್ಮ ಪಾರ್ಶ್ವವಾಯುವಿಗೆ ಒಳಗಾಗಿ, ಕಾಲಿನ ಸ್ವಾಧೀನ ಕಳೆದುಕೊಂಡ ಪತಿ ಸಚಿನ್ರನ್ನು ಬೆನ್ನ ಮೇಲೆ ಪುಟ್ಟ ಮಗುವನ್ನು ಎತ್ತಿಕೊಂಡಂತೆ ಎತ್ತಿಕೊಂಡು ಕನ್ವರ್ಯಾತ್ರೆಗೆ ಕರೆದುಕೊಂಡು ಬಂದಿದ್ದಾರೆ. ಹೌದು, ನೀವು ಕೇಳಿದ್ದು ನಿಜ! ಸುಮಾರು 150 ಕಿಲೋಮೀಟರ್ ದೂರವನ್ನು ಅವರು ಬರಿಗಾಲಲ್ಲಿ ಕ್ರಮಿಸಿದ್ದಾರೆ.
ಪತಿ ಸಚಿನ್, ಗಾಜಿಯಾಬಾದ್ನ ಮೋದಿನಗರದ ಬಖರ್ವಾ ಗ್ರಾಮದ ನಿವಾಸಿ. ಅವರು ಕಳೆದ 13 ವರ್ಷಗಳಿಂದ ಪ್ರತಿ ವರ್ಷವೂ ತಪ್ಪದೆ ಕಾಲ್ನಡಿಗೆಯಲ್ಲಿ ಸಾಗುತ್ತಾ ಕನ್ವರ್ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ, ಕಳೆದ ವರ್ಷ ಬೆನ್ನುಹುರಿಯ ಗಾಯದಿಂದಾಗಿ ಅವರು ಪಾರ್ಶ್ವವಾಯುವಿಗೆ ಒಳಗಾದರು. ಇದರಿಂದಾಗಿ ಈ ವರ್ಷ ಅವರಿಗೆ ಯಾತ್ರೆಯಲ್ಲಿ ಸಾಗಲು ಸಾಧ್ಯವಾಗಲಿಲ್ಲ. ಆದರೆ, ಅವರ ಧೀರ ಪತ್ನಿ ಆಶಾ, ತನ್ನ ಪತಿಯನ್ನು ಎದೆಗುಂದಲು ಬಿಡಲಿಲ್ಲ. ಪತಿಯ ಖುಷಿಗಾಗಿ, ಅವರ ಆರೋಗ್ಯ ಸುಧಾರಿಸಲಿ ಎಂಬ ನಂಬಿಕೆಯಲ್ಲಿ, ಆಕೆ ಈ ಕಠಿಣ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.
“ತನ್ನ ಈ ತ್ಯಾಗ ಮತ್ತು ಪರಿಶ್ರಮಕ್ಕೆ ಕರಗಿಯಾದರೂ ಭಗವಂತ ತನ್ನ ಪತಿಯನ್ನು ಅನಾರೋಗ್ಯದಿಂದ ರಕ್ಷಿಸಿ ಹುಷಾರು ಮಾಡುತ್ತಾನೆ” ಎಂಬ ದೃಢ ನಂಬಿಕೆಯೊಂದಿಗೆ ಆಶಾ ಈ ಪಯಣವನ್ನು ಮುಂದುವರಿಸಿದ್ದಾರೆ. ಹರಿದ್ವಾರದಿಂದ ಮೋದಿನಗರದವರೆಗೆ ಬರಿಗಾಲಲ್ಲಿ ಸಾಗಿದ ಆಕೆ, “ನನ್ನ ಪತಿ ಒಂದು ದಿನ ಮತ್ತೆ ಮೊದಲಿನಂತೆ ನಡೆಯಬೇಕು ಎಂಬುದೇ ನನ್ನ ಏಕೈಕ ಆಸೆ” ಎಂದು ಹೇಳಿದ್ದಾರೆ. ಅವರ ಇಬ್ಬರು ಪುಟ್ಟ ಮಕ್ಕಳು ಕೂಡ ಅವರೊಂದಿಗೆ ಬಂದಿದ್ದು, ಈ ಪುಟ್ಟ ಕುಟುಂಬದ ದೃಢಸಂಕಲ್ಪವು ನೋಡುಗರನ್ನು ಭಾವುಕರನ್ನಾಗಿಸಿದೆ.
ಈ ಮನಕಲುಕುವ ದೃಶ್ಯವನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದು ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಆಶಾ ಅವರ ಪ್ರೀತಿ, ಭಕ್ತಿ ಮತ್ತು ದೃಢ ಸಂಕಲ್ಪಕ್ಕೆ ಇಡೀ ದೇಶವೇ ಬೆರಗಾಗಿದೆ. ಅನೇಕರು ಈ ಮಹಿಳೆಯನ್ನು ನೋಡಿ ಭಾವುಕರಾಗಿದ್ದು, ಆಕೆಯ ಪತಿ ಶೀಘ್ರವೇ ಹುಷಾರಾಗಲಿ ಎಂದು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: ಈರುಳ್ಳಿ ಬೀಜದಿಂದ ಕೋಟಿ ಕೋಟಿ ಆದಾಯ ಗಳಿಸಿದ ಬೀದರ್ನ ರೈತ
ಕಟ್ಟಿಕೊಂಡ ಪತ್ನಿಯೇ ಗಂಡನ ಕಥೆ ಮುಗಿಸುತ್ತಿರುವ ಈ ಕಾಲಘಟ್ಟದಲ್ಲಿ, ಪತಿಯ ಖುಷಿಗಾಗಿ, ಅವರ ಆಯುಷ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಇಂತಹ ಪತ್ನಿಯರು ಇದ್ದಾರೆ ಎಂಬುದಕ್ಕೆ ಆಶಾ ಒಂದು ಜೀವಂತ ಸಾಕ್ಷಿ. ಇಂತಹ ಘಟನೆಗಳು ಮಾನವ ಸಂಬಂಧಗಳಲ್ಲಿನ ನಂಬಿಕೆ ಮತ್ತು ಪ್ರೀತಿಯ ಮಹತ್ವವನ್ನು ಸಾರುತ್ತವೆ.
Sri Rama is a seasoned journalist with four years of experience, specializing in capturing and analyzing the latest news and trending stories. He brings extensive expertise in news collection, reporting, and interviewing across a broad spectrum of topics, including politics.