
ದೈವ ದೇವರು ಮತ್ತು ದೇವಸ್ಥಾನಗಳ ಬಗ್ಗೆ ಅಪಾರ ಭಕ್ತಿ ಹೊಂದಿರುವ ಭಾರತೀಯರು ತಮ್ಮ ಇಷ್ಟಾರ್ಥಗಳು ನೆರವೇರಿದ ನಂತರ ಕಾಣಿಕೆಗಳನ್ನು ಅರ್ಪಿಸುವುದು ಸಾಮಾನ್ಯ ಸಂಗತಿ. ಚಿನ್ನ, ಬೆಳ್ಳಿ, ಹಣ, ಧಾನ್ಯ ಹೀಗೆ ನಾನಾ ರೂಪಗಳಲ್ಲಿ ಭಕ್ತರು ತಮ್ಮ ಹರಕೆಯನ್ನು ತೀರಿಸುತ್ತಾರೆ. ಅತಿ ಹೆಚ್ಚು ದೇವಸ್ಥಾನಗಳನ್ನು ಹೊಂದಿರುವ ರಾಜ್ಯವಾದ ತಮಿಳುನಾಡು ಇದೀಗ ಈ ದೇವಸ್ಥಾನಗಳ ಕಾಣಿಕೆಗಳ ಮೂಲಕ ಲಾಭ ಗಳಿಸಲು ಮುಂದಾಗಿದೆ.
ಸುಮಾರು 21 ಪ್ರಮುಖ ದೇವಾಲಯಗಳಲ್ಲಿ ಭಕ್ತರು ನೀಡಿದ್ದ ಒಂದು ಟನ್ ಚಿನ್ನಾಭರಣಗಳನ್ನು ಕರಗಿಸಿ 24 ಕ್ಯಾರೆಟ್ ಚಿನ್ನದ ಬಿಸ್ಕತ್ತುಗಳನ್ನಾಗಿ ಪರಿವರ್ತಿಸಿರುವ ತಮಿಳುನಾಡು ಸರ್ಕಾರ, ಅವುಗಳನ್ನು ಬ್ಯಾಂಕ್ನಲ್ಲಿ ಠೇವಣಿ ಇಟ್ಟು ವಾರ್ಷಿಕ ಬಡ್ಡಿ ಹಣವನ್ನು ಪಡೆಯಲು ನಿರ್ಧರಿಸಿದೆ. ಈ ಹಣವನ್ನು ದೇವಸ್ಥಾನಗಳ ಅಭಿವೃದ್ಧಿಗಾಗಿ ಬಳಸುವುದಾಗಿ ಸರ್ಕಾರ ಹೇಳಿಕೊಂಡಿದೆ.
ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಭಕ್ತರು ತಮ್ಮ ಭಕ್ತಿ ಮತ್ತು ನಂಬಿಕೆಯ ಸಂಕೇತವಾಗಿ ನೀಡಿದ ಆಭರಣಗಳನ್ನು ಕರಗಿಸಿ ಲಾಭ ಗಳಿಸುವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. “ನಾವು ನಮ್ಮ ದೇವರಿಗೆ ನಮ್ಮ ನಂಬಿಕೆಯಿಂದ ವಜ್ರವನ್ನೋ, ಆಭರಣವನ್ನೋ ನೀಡುತ್ತೇವೆ. ಅದನ್ನು ಕರಗಿಸಲು ಸರ್ಕಾರಕ್ಕೆ ಯಾರು ಅಧಿಕಾರ ನೀಡಿದರು? ಇದು ನಮ್ಮ ನಂಬಿಕೆಗೆ ಮಾಡಿದ ಅಪಮಾನ” ಎಂದು ಭಕ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಧಾರ್ಮಿಕ ಟ್ರಸ್ಟ್ನಲ್ಲೂ ಮುಸ್ಲಿಮರಿಗೆ ಅವಕಾಶ!
ಮುಜರಾಯಿ ಇಲಾಖೆಯ ಸಚಿವ ಪಿ.ಕೆ. ಶೇಖರ್ ಅವರು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದು, “ಭಕ್ತರು ನೀಡಿದ ಚಿನ್ನಾಭರಣಗಳನ್ನು ಕರಗಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಠೇವಣಿ ಇಡಲಾಗಿದೆ. ಇದರಿಂದ ವಾರ್ಷಿಕವಾಗಿ 17.82 ಕೋಟಿ ರೂಪಾಯಿ ಬಡ್ಡಿ ಬರುತ್ತದೆ. ಈ ಹಣವನ್ನು ದೇವಾಲಯಗಳ ಅಭಿವೃದ್ಧಿಗಾಗಿ ಬಳಸಲಾಗುವುದು” ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ, ಭಕ್ತರು ಈ ಸಮಜಾಯಿಷಿಕೆಯನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. “ನಾವು ನೀಡಿದ್ದು ಕೇವಲ ಚಿನ್ನದ ತುಂಡುಗಳನ್ನಲ್ಲ, ಅದರಲ್ಲಿ ನಮ್ಮ ಭಾವನೆಗಳು, ನಮ್ಮ ಭಕ್ತಿ ಅಡಗಿದೆ. ಸರ್ಕಾರ ಅದನ್ನು ಕರಗಿಸುವ ಮೂಲಕ ನಮ್ಮ ನಂಬಿಕೆಗೆ ಧಕ್ಕೆ ತಂದಿದೆ” ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂತಹದ್ದೇ ವಿವಾದಾತ್ಮಕ ಆಲೋಚನೆಗಳು ಇನ್ನು ಯಾವ ರಾಜ್ಯಗಳ ಸರ್ಕಾರಗಳಿಗೆ ಹೊಳೆಯುತ್ತವೋ ಕಾದು ನೋಡಬೇಕಿದೆ. ಭಕ್ತರ ನಂಬಿಕೆ ಮತ್ತು ಕಾಣಿಕೆಗಳನ್ನು ಸರ್ಕಾರ ಹೇಗೆ ಬಳಸಿಕೊಳ್ಳುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಗಮನಾರ್ಹ ವಿಷಯವಾಗಲಿದೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ಆತಂಕದ ವಾತಾವರಣ!