ಬೆಂಗಳೂರಿನಲ್ಲಿ ನಡೆದ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಂತೆಯೇ ಮತ್ತೊಂದು ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಭವಿಸಿದೆ. ಆಗ್ರಾದಲ್ಲಿ ಐಟಿ ಕಂಪನಿ ಮ್ಯಾನೇಜರ್ (IT Company Manager) ಆಗಿದ್ದ ಮಾನವ್ ಶರ್ಮಾ ಎಂಬಾತ ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನವ್ ಶರ್ಮಾ ಲೈವ್ ವಿಡಿಯೋ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಗ್ರಾದ ಡಿಫೆನ್ಸ್ ಕಾಲೊನಿಯಲ್ಲಿ ಈ ದುರ್ಘಟನೆ ನಡೆದಿದೆ. ಮಾನವ್ ಶರ್ಮಾ ಟಿಸಿಎಸ್ (TCS) ಐಟಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದರು. ಫೆಬ್ರವರಿ 24ರಂದು ಅವರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅವರು ವಿಡಿಯೋ ಮಾಡಿದ್ದು, ತಮ್ಮ ಈ ನಿರ್ಧಾರಕ್ಕೆ ಪತ್ನಿಯೇ ಕಾರಣ ಎಂದು ಆರೋಪಿಸಿದ್ದಾರೆ.
ಮಾನವ್ ಶರ್ಮ ಹೇಳಿದ್ದೇನು?
ಮಾನವ್ ಶರ್ಮಾ ಲೈವ್ ವಿಡಿಯೋದಲ್ಲಿ ತನ್ನ ನೋವನ್ನು ತೋಡಿಕೊಂಡಿದ್ದಾರೆ. “ನಾನು ಸಾಯಲು ನನ್ನ ಹೆಂಡತಿಯೇ ಕಾರಣ. ಅಪ್ಪಾ, ಅಮ್ಮ ನನ್ನನ್ನು ಕ್ಷಮಿಸಿ. ನನ್ನ ತಂದೆ ತಾಯಿಗೆ ಯಾರು ತೊಂದರೆ ಕೊಡಬೇಡಿ. ನನ್ನ ಹೆಂಡತಿಯ ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಸಾವು ಬಿಟ್ಟು ಬೇರೆ ಯಾವ ದಾರಿ ಇಲ್ಲ. ಪುರುಷರಿಗಾಗಿ ದೇಶದಲ್ಲಿ ಯಾವುದೇ ಕಾನೂನಿಲ್ಲ. ಇನ್ನಾದ್ರೂ ಪುರುಷರನ್ನು ರಕ್ಷಿಸಲು ಕಾನೂನು ರಚಿಸಿ” ಎಂದು ಹೇಳಿ ಅವರು ತಮ್ಮ ಜೀವವನ್ನು ಕೊನೆಗೊಳಿಸಿಕೊಂಡಿದ್ದಾರೆ.
ಕಳೆದ ವರ್ಷವಷ್ಟೇ ಮಾನವ್ ಶರ್ಮ ಮದುವೆಯಾಗಿತ್ತು. ಕೆಲಸದ ನಿಮಿತ್ತ ಮಾನವ್ ತನ್ನ ಪತ್ನಿಯನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಅವರ ನಡುವೆ ಪ್ರತಿದಿನ ಜಗಳಗಳು ನಡೆಯುತ್ತಿದ್ದವು. ಪತ್ನಿ ತನ್ನ ಹಳೆಯ ಪ್ರೇಮಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಮನನೊಂದ ಮಾನವ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಅಪಘಾತದಲ್ಲಿ ಬೇರ್ಪಟ್ಟ ತಲೆಯನ್ನು ಯಶಸ್ವಿಯಾಗಿ ಮರುಜೋಡಿಸಿದ ಇಸ್ರೇಲ್ ವೈದ್ಯರು
ಶ್ರೀ ರಾಮ ಅವರು ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ, ಟ್ರೆಂಡಿಂಗ್ ಕಥೆಗಳು ಹಾಗೂ ಅವುಗಳ ವಿಶ್ಲೇಷಣೆಯನ್ನು ನಿಖರವಾಗಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ಪರಿಣತಿ ಇದೆ. ರಾಜಕೀಯ ಸೇರಿದಂತೆ ಹಲವು ವಿಷಯಗಳಿಂದ ಸುದ್ದಿ ಸಂಗ್ರಹಣೆ, ವರದಿಗಾರಿಕೆ ಮತ್ತು ಸಂದರ್ಶನಗಳಲ್ಲಿ ಶ್ರೀ ರಾಮ ಉತ್ತಮ ನೈಪುಣ್ಯ ಪ್ರದರ್ಶಿಸಿದ್ದಾರೆ.
