
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 32ನೇ ಚಾತುರ್ಮಾಸ್ಯ ವ್ರತ ಆಷಾಡ ಶುದ್ಧ ಪೂರ್ಣಿಮೆಯಂದು ಆರಂಭವಾಯಿತು. ಸ್ವಭಾಷಾ ಚಾತುರ್ಮಾಸ್ಯದ (Swabhasha Chaturmasya) ಧರ್ಮ ಸಭೆಯಲ್ಲಿ ಶ್ರೀಗಳು ಗುರುವಿನ ಅಖಂಡ ಮಹಿಮೆ ಮತ್ತು ಜೀವನದಲ್ಲಿ ಅವರ ಅನಿವಾರ್ಯ ಪಾತ್ರವನ್ನು ಮನಮುಟ್ಟುವಂತೆ ವಿವರಿಸಿದರು. ಹಾಗೆಯೇ ಚಾತುರ್ಮಾಸ್ಯದ ಮಹತ್ವವನ್ನು ಸಹ ಧರ್ಮಸಭೆಯಲ್ಲಿ ತಿಳಿಸಿದರು .
“ನಮ್ಮ ಜೀವನದಲ್ಲಿ ಗುರುವಿನ ಸ್ಥಾನ ಎಂತಹದು? ಸಮುದ್ರದಲ್ಲಿ ಸಕಲ ನದಿಗಳು ಹೇಗೆ ಸಂಗಮಗೊಳ್ಳುತ್ತವೆಯೋ, ಹಾಗೆಯೇ ಗುರುವಿನಲ್ಲಿ ಸಮಸ್ತ ದೇವತೆಗಳ ಸನ್ನಿಧಾನವಿದೆ. ಗುರುವಿಗೆ ಕೈಮುಗಿದರೆ, ಸಕಲ ದೇವತೆಗಳಿಗೂ ನಮಸ್ಕರಿಸಿದಂತೆ, ಅವರ ಆಶೀರ್ವಾದ ಪಡೆದಂತೆ” ಎಂದು ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.ಪ್ರಾಣಿಗಳಿಗಿಂತ ಮಾನವರು ಶ್ರೇಷ್ಠ, ಮಾನವರಿಗಿಂತ ದೇವತೆಗಳು ಶ್ರೇಷ್ಠ, ಆದರೆ ದೇವತೆಗಳಿಗಿಂತಲೂ ಗುರು ಶ್ರೇಷ್ಠ ಎಂಬುದು ಅವರ ಸ್ಪಷ್ಟ ನುಡಿಗಳಲ್ಲಿ ವ್ಯಕ್ತವಾಯಿತು.
ಜೀವನದ ಹೆಜ್ಜೆಗಳನ್ನು ಮುಂದಿಡಬೇಕಾದರೆ, ನಮಗೆ ಗುರುವಿನ ಅಗತ್ಯವಿದೆ. ದಾರಿ ತಪ್ಪಿದ ಹೆಜ್ಜೆಗಳು ಪತನಕ್ಕೆ ಕಾರಣವಾಗುತ್ತವೆ. ಆದರೆ, ಸರಿಯಾದ ಮಾರ್ಗವನ್ನು ತೋರಿಸುವವನು ಗುರುವೇ. “ಬೇರೆ ಯಾರೋ ದಾರಿ ತೋರಿಸಿದರೆ ಅವನು ಗುರುವಲ್ಲವೇ ಎಂದು ಸಂಶಯ ಬೇಡ. ಸರಿಯಾದ ದಾರಿಯನ್ನು ತೋರಿಸಿದಾತ ಗುರುವಿನ ರೂಪದಲ್ಲಿ ಬಂದಿದ್ದಾನೆಂದೇ ಭಾವಿಸಬೇಕು” ಎಂದು ತಿಳಿಸಿದರು. ಜೀವನದ ಆದಿಯಿಂದ ಅಂತ್ಯದವರೆಗೆ ನಮಗೆ ಮೊದಲು ಬೇಕಾಗುವವನು, ಕೊನೆಗೂ ಬೇಕಾಗುವವನು ಗುರುವೇ ಎಂದು ಗುರುವಿನ ಸರ್ವವ್ಯಾಪಕತೆಯನ್ನು ಸಾರಿದರು.
ಚಾತುರ್ಮಾಸ್ಯದ ಮಹತ್ವವನ್ನು ವಿವರಿಸುತ್ತಾ ಶ್ರೀ ಗಳು ಈ ಚಾತುರ್ಮಾಸ್ಯ ಸಮಯದಲ್ಲಿ “ಗುರುಗಳು ಅನುಷ್ಠಾನ ಮಾಡುತ್ತಾರೆ, ನೀವೂ ಮಾಡಬೇಕು ಎಂದರು..ಗೃಹಸ್ಥರಿಗೂ ಅನ್ವಯವಾಗುವಂತೆ ಚಾತುರ್ಮಾಸ್ಯ ನಿಯಮಗಳನ್ನು ಅಳವಡಿಸಿಕೊಳ್ಳಬಹುದು ಎಂದು ಸೂಚಿಸಿದರು. ಚಾತುರ್ಮಾಸವು ಅನುಷ್ಠಾನಕ್ಕೆ, ಅಂದರೆ ಆಧ್ಯಾತ್ಮಿಕ ಅಭ್ಯಾಸಗಳನ್ನು ಕೈಗೊಳ್ಳಲು ಅತ್ಯಂತ ಪ್ರಶಸ್ತವಾದ ಸಮಯ. ಗೃಹಸ್ಥರು ಸಹ ತಮ್ಮ ಜೀವನಶೈಲಿಗೆ ಅನುಗುಣವಾಗಿ ಕೆಲ ನಿಯಮಗಳನ್ನು ಅಳವಡಿಸಿಕೊಂಡು, ನಿತ್ಯವೂ ಸ್ವಲ್ಪ ಸಮಯವನ್ನು ಧ್ಯಾನ, ಮಂತ್ರ ಜಪ ಮತ್ತು ಇಷ್ಟದೇವತಾ ಆರಾಧನೆಗೆ ಮೀಸಲಿಡಬೇಕು ಎಂದು ಶ್ರೀ ಗಳು ಹೇಳಿದರು.

ಅನುಷ್ಠಾನದಲ್ಲಿ ಅತ್ಯಂತ ಮಹತ್ವದ ಅಂಶವಾಗಿ ಸಂಧ್ಯಾವಂದನೆಯನ್ನು ಸ್ವಾಮೀಜಿಗಳು ಬಲವಾಗಿ ಪ್ರತಿಪಾದಿಸಿದರು. “ಸಂಧ್ಯಾವಂದನೆಯನ್ನು ಬಿಟ್ಟು ಹೋದವರಿಗೆ ಪ್ರಾರಂಭ ಮಾಡುವುದಕ್ಕೆ ಬಾರಿ ಒಳ್ಳೆ ಕಾಲ ಇದು. ಈ ಎರಡು ತಿಂಗಳು ಯಾವುದೇ ಕಾರಣಕ್ಕೂ ಸಂಧ್ಯಾವಂದನೆಯನ್ನು ಬಿಡಬೇಡಿ. ಎರಡು ತಿಂಗಳು ಅಭ್ಯಾಸವಾದರೆ ಆಮೇಲೆ ಅದೇ ನಮ್ಮನ್ನು ಬಿಡುವುದಿಲ್ಲ. ಸಂಧ್ಯಾವಂದನೆ ಮಾಡದಿದ್ದರೆ ಏನೋ ಕಳೆದುಕೊಂಡಂತೆ ಆಗುತ್ತದೆ” ಎಂದು ಪುರುಷರಿಗೆ ಕರೆ ನೀಡಿದರು. ಉಪನೀತ ಪುರುಷರು ಸಂಧ್ಯಾವಂದನೆ ಪ್ರಾರಂಭಿಸಿದರೆ, ಮಹಿಳೆಯರು ಹಾಗೂ ಉಪನಯನ ಸಂಸ್ಕಾರವಿಲ್ಲದವರು ದಿನಕ್ಕೊಂದು ಅರ್ಧ ಗಂಟೆ, ಒಂದು ಗಂಟೆ ಧ್ಯಾನವನ್ನು ಪ್ರಾರಂಭಿಸಬಹುದು ಎಂದು ಹೇಳಿದರು. ಆತ್ಮಮಾರ್ಗಕ್ಕೆ ಉಪನಯನವೇ ಅನಿವಾರ್ಯವಲ್ಲ, ಭಕ್ತಿ ಮತ್ತು ಧ್ಯಾನ ಎಲ್ಲರಿಗೂ ಸಾಧ್ಯ ಎಂಬುದನ್ನು ಒತ್ತಿ ಹೇಳಿದರು.
ಎಲ್ಲಾ ಶಿಷ್ಯರಿಗೆಚಾತುರ್ಮಾಸ್ಯದಲ್ಲಿ ನಿತ್ಯ ಒಂದಿಷ್ಟು ಹೊತ್ತಾದರೂ ಅಂತರ್ಮುಖಿಗಳಾಗಿ ಪರಮಾತ್ಮನಿಗೆ, ಈಶ್ವರನಿಗೆ ಒಂದಿಷ್ಟು ಸಮಯವನ್ನು ಕೊಡಿ ಎಂದು ಕರೆ ನೀಡಿದರು. “ಒಂದು ಚೂರು ಹೊತ್ತಾದರೂ ಸುಮ್ಮನೆ ಕೂತ್ಕೊಳ್ಳಿ. ಏನು ಮಾಡದೆ ಕೊಂಚ ಹೊತ್ತು ಸುಮ್ಮನೆ ಕೂತರೂ ಅದಕ್ಕೊಂದು ಒಳ್ಳೆ ಫಲವಿದೆ” ಎಂದು ಮೌನ ಸಾಧನೆಯ ಮಹತ್ವವನ್ನು ತಿಳಿಸಿದರು. “ಸುಮ್ಮನೆ ಕೂತ್ಕೊಳ್ಳುವುದು ಕಷ್ಟ. ಕೆಲಸ ಮಾಡುವುದು ಸುಲಭ. 20 ನಿಮಿಷ ಸುಮ್ಮನೆ ಕೂತರೆ, ನಿಮ್ಮಲ್ಲಿ ಆಗುವ ಪರಿವರ್ತನೆ ಅಂತದ್ದು. ಚಲನೆಯಿಲ್ಲದೆ, ಅಲುಗಾಡದೆ ನಿಶ್ಚಲವಾಗಿ ಕೂತ್ಕೊಳ್ಳಬೇಕಾದರೆ, ಅವನು ದಾರಿ ಹಿಡಿದ ಅಂತಲೇ ಅರ್ಥ. ಅವನಿಗೆ ಧ್ಯಾನ ಫಲಿಸುತ್ತಿದೆ ಅಂತಲೇ ಅರ್ಥ” ಎಂದು ಈ ಅಭ್ಯಾಸದ ಶಕ್ತಿಯನ್ನು ಮನವರಿಕೆ ಮಾಡಿಕೊಟ್ಟರು.

ಒಟ್ಟಾರೆಯಾಗಿ, ಚಾತುರ್ಮಾಸ್ಯ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಬದಲಿಗೆ ವ್ಯಕ್ತಿಯನ್ನು ಆಂತರಿಕವಾಗಿ ಶುದ್ಧೀಕರಿಸುವ, ಆಧ್ಯಾತ್ಮಿಕವಾಗಿ ಬಲಪಡಿಸುವ ಮತ್ತು ಜೀವನಕ್ಕೆ ಪೂರ್ಣತೆಯನ್ನು ತಂದುಕೊಡುವ ದಿವ್ಯ ಕಾಲವಾಗಿದೆ ಎಂಬುದು ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಪ್ರವಚನದ ಮುಖ್ಯ ಆಶಯ.
Sri Rama is a seasoned journalist with four years of experience, specializing in capturing and analyzing the latest news and trending stories. He brings extensive expertise in news collection, reporting, and interviewing across a broad spectrum of topics, including politics.