
ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ 9 ನೆಲೆಗಳನ್ನ ಧ್ವಂಸಗೊಳಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ, ‘ಆಪರೇಷನ್ ಸಿಂಧೂರ್’ ಎಂಬ ಹೆಸರು ದೇಶಾದ್ಯಂತ ಸದ್ದು ಮಾಡ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ್’ ಎಂದು ಹೆಸರಿಟ್ಟಿದ್ದಾರೆ. ಈ ಹೆಸರು ಜಗತ್ತಿನಾದ್ಯಂತ ಚರ್ಚೆಯಾಗ್ತಿದೆ.
ಈ ಕಾರ್ಯಾಚರಣೆಯ ಸುದ್ದಿ ಹರಡುತ್ತಿದ್ದಂತೆಯೇ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣೆಗೆ ಸಿಂಧೂರ ಇಟ್ಟುಕೊಂಡು ಸುದ್ದಿಗೋಷ್ಠಿ ನಡೆಸಿದ್ದು ಕೂಡ ವಿವಾದಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರ ಸಿಂಧೂರದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಟೀಕಿಸಿದ್ದಾರೆ.
ಆದರೆ, ಸಿಎಂ ಸಿದ್ದರಾಮಯ್ಯ ಅವರೇ ಈ ಸಿಂಧೂರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ನಾನು ಇವತ್ತು ಪಟಾಲಮ್ಮ ದೇವಿಯ ದರ್ಶನಕ್ಕೆ ಹೋಗಿದ್ದೆ. ದೇವಿಯ ದರ್ಶನದ ಬಳಿಕ ಇಲ್ಲಿಗೆ ಬಂದಿದ್ದೇನೆ,” ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೆ ವಿದೇಶಿ ಫಂಡಿಂಗ್? ವಿದೇಶಿ ನಂಟಿನ ಬಗ್ಗೆ ತನಿಖೆ!
ಅಸಲಿ ಕಥೆ ಏನು?
ಸಿಎಂ ಸಿದ್ದರಾಮಯ್ಯ ಇಂದು ಬೆಳಿಗ್ಗೆ ಜಯನಗರದ 3ನೇ ಬ್ಲಾಕ್ನಲ್ಲಿರುವ ಪಟಾಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಪಟಾಲಮ್ಮ ದೇವಿಯ ದರ್ಶನ ಪಡೆದ ನಂತರ, ದೇವಸ್ಥಾನದ ಅರ್ಚಕರು ಅವರಿಗೆ ಹಣೆಗೆ ಸಿಂಧೂರವಿಟ್ಟರು. ಸಚಿವ ಬೈರತಿ ಸುರೇಶ್ ಮತ್ತು ಕಾಂಗ್ರೆಸ್ ನಾಯಕರಾದ ಎಚ್.ಎಂ. ರೇವಣ್ಣ ಸೇರಿದಂತೆ ಹಲವು ನಾಯಕರು ಸಿಎಂ ಜೊತೆಗಿದ್ದರು.
ಜಯನಗರದಲ್ಲಿ ಪಟಾಲಮ್ಮ ದೇವಿ ರಥೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ರಥೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ ತೆರಳಿದ್ದರು. ಅಲ್ಲಿ ಪಟಾಲಮ್ಮ ದೇವಿಗೆ ಪೂಜೆ ಸಲ್ಲಿಸಿದ ನಂತರ ಅವರು ನೇರವಾಗಿ ಸುದ್ದಿಗೋಷ್ಠಿಗೆ ಬಂದಿದ್ದರು.
‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಂಭ್ರಮಾಚರಣೆಯ ನಡುವೆಯೇ ಸಿಎಂ ಸಿದ್ದರಾಮಯ್ಯ ಸಿಂಧೂರದೊಂದಿಗೆ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.