
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕರ ಪ್ರವಾಸಿಗರ ಮೇಲೆ ನಡೆದ ಹೇಯ ಭಯೋತ್ಪಾದಕ ದಾಳಿಯು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 26 ಅಮಾಯಕ ಜೀವಗಳನ್ನು ಬಲಿಪಡೆದ ಈ ರಾಕ್ಷಸ ಕೃತ್ಯಕ್ಕೆ ಸ್ಯಾಂಡಲ್ವುಡ್ನ ಖ್ಯಾತ ನಟರು ತೀವ್ರವಾಗಿ ಖಂಡಿಸಿದ್ದಾರೆ. ಉಗ್ರರ ಈ ನರಮೇಧದ ವಿರುದ್ಧ ತಮ್ಮ ಆಕ್ರೋಶವನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ವ್ಯಕ್ತಪಡಿಸಿದ್ದಾರೆ.
ಶಿವರಾಜ್ಕುಮಾರ್: ನಟ ಶಿವರಜ್ಕುಮಾರ್ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಉಗ್ರರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಈ ದುರಂತದಲ್ಲಿ ಮೃತಪಟ್ಟ ಮೂವರು ಕನ್ನಡಿಗರಿಗೆ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ. “ಯಾಕಿಷ್ಟು ಕೋಪ ಗೊತ್ತಿಲ್ಲ. ಮಾನವೀಯತೆ ತುಂಬಾ ಮುಖ್ಯ. ಯಾಕೆ ಈ ಮಟ್ಟಕ್ಕೆ ಹೋಗ್ತಿದೆ ಅರ್ಥವಾಗುತ್ತಿಲ್ಲ. ಸಾವಿನ ಸುದ್ದಿ ನಿಜಕ್ಕೂ ಬೇಸರ ತರಿಸಿತು. ಉಗ್ರಗಾಮಿಗಳಿಗೆ ಶಿಕ್ಷೆ ಆಗಲೇಬೇಕು” ಎಂದು ಶಿವಣ್ಣ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿದ್ದುಕೊಂಡು ಉಗ್ರ ಕೃತ್ಯವನ್ನು ಆಚರಿಸಿತೇ ಪಾಕ್ ಹೈಕಮಿಷನ್?
ಕಿಚ್ಚ ಸುದೀಪ್: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. “ಪಹಲ್ಗಾಮ್ನಲ್ಲಿ ಅಮಾಯಕರ ನೆತ್ತರು ಹರಿಸಲಾಗಿದೆ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ, ದೇಶದ ಶಕ್ತಿಯ ಮೇಲೆ ಮಾಡಲಾದ ದಾಳಿ. ಇದು ಸುಮ್ಮನಿರುವ ಸಮಯವಲ್ಲ. ಈ ಘಟನೆಗೆ ತಕ್ಷಣ ಪ್ರತಿಕ್ರಿಯೆ ನೀಡಬೇಕು. ಈ ಹೀನ ಕೃತ್ಯದಲ್ಲಿ ಪಾಲ್ಗೊಂಡವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ” ಎಂದು ಕಿಚ್ಚ ಸುದೀಪ್ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರನ್ನು ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ.
ಧ್ರುವ ಸರ್ಜಾ: ನಟ ಧ್ರುವ ಸರ್ಜಾ ಅವರು ಎಕ್ಸ್ನಲ್ಲಿ ತಮ್ಮ ದುಃಖ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. “ಭಾರತಾಂಬೆಯ ಕಳಶದಂತಿರುವ ಜಮ್ಮು ಮತ್ತು ಕಾಶ್ಮೀರ ಎಂದಿಗೂ ನಮ್ಮದೆ. ಪಹಲ್ಗಾಮ್ನಲ್ಲಿ ಉಗ್ರರು ಅಮಾಯಕರ ಮೇಲೆ ನಡೆಸಿದ ಈ ಕೃತ್ಯವನ್ನು ಎಂದಿಗೂ ಕ್ಷಮಿಸಲಾಗದು. ಎಲ್ಲಾ ಧರ್ಮದ ಸಾರ ಪ್ರೀತಿ ಹಾಗೂ ಅಹಿಂಸೆ. ಪ್ರೀತಿಯಿಂದ ಸಾಧಿಸಲಾಗದ್ದು, ಹಿಂಸೆ ಹಾಗೂ ದ್ವೇಷದಿಂದ ಸಾಧಿಸಲು ಸಾಧ್ಯವೇ ಇಲ್ಲ. ಪ್ರಾಣ ಬಿಟ್ಟವರ ಆತ್ಮಕ್ಕೆ ಶಾಂತಿ ಸಿಗಲಿ. ಕಳೆದುಕೊಂಡವರ ಕುಟುಂಬಗಳಿಗೆ ದೇವರು ಧೈರ್ಯ ಕರುಣಿಸಲಿ” ಎಂದು ಧ್ರುವ ಸರ್ಜಾ ಭಾವುಕರಾಗಿ ಬರೆದುಕೊಂಡಿದ್ದಾರೆ.
ಯಶ್: ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ಎಕ್ಸ್ನಲ್ಲಿ ತಮ್ಮ ತೀವ್ರ ದುಃಖವನ್ನು ಹಂಚಿಕೊಂಡಿದ್ದಾರೆ. “ಪಹಲ್ಗಾಮ್ನಲ್ಲಿ ಮುಗ್ಧ ಜನರ ಕ್ರೂರ ಹತ್ಯೆಯಿಂದ ತೀವ್ರ ದುಃಖವಾಗಿದೆ. ಮುಗ್ಧ ಜನರ ಮೇಲಿನ ಈ ದಾಳಿಯನ್ನು ಊಹಿಸಲು ಸಹ ಸಾಧ್ಯವಿಲ್ಲ. ಈ ಭೀಕರ ದುರಂತದಲ್ಲಿ ಸಂತ್ರಸ್ತರ ಕುಟುಂಬಗಳು ಮತ್ತು ರಾಷ್ಟ್ರದೊಂದಿಗೆ ನಾವು ದೃಢವಾಗಿ ನಿಲ್ಲುತ್ತೇವೆ” ಎಂದು ಯಶ್ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಸ್ಯಾಂಡಲ್ವುಡ್ನ ಈ ಜನಪ್ರಿಯ ನಟರ ಆಕ್ರೋಶ ಮತ್ತು ಸಂತಾಪವು ಪಹಲ್ಗಾಮ್ ದಾಳಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ದೇಶಾದ್ಯಂತ ಸಾಮಾನ್ಯ ಜನರು ಮತ್ತು ಗಣ್ಯರು ಈ ಹೇಯ ಕೃತ್ಯವನ್ನು ಖಂಡಿಸುತ್ತಿದ್ದು, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.