
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ವಿವಾದ ಇನ್ನೂ ಹಸಿರಾಗಿರುವಾಗಲೇ, ಇದೀಗ ಕೇಂದ್ರ ಸರ್ಕಾರದ ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ನಡೆಸಲಿರುವ ಪರೀಕ್ಷೆಯಲ್ಲಿಯೂ ಇದೇ ರೀತಿಯ ನಿಯಮಾವಳಿಗಳು ಮುನ್ನೆಲೆಗೆ ಬಂದಿವೆ. ಆರ್ಆರ್ಬಿ ನಡೆಸುವ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಯ ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರದಲ್ಲಿ ಮಂಗಳಸೂತ್ರ ಮತ್ತು ಯಾವುದೇ ರೀತಿಯ ಧಾರ್ಮಿಕ ಸಂಕೇತಗಳನ್ನು ಧರಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಏಪ್ರಿಲ್ 29 ರಂದು ನಡೆಯಲಿರುವ ಈ ಪರೀಕ್ಷೆಯ ಪ್ರವೇಶ ಪತ್ರದ ಏಳನೇ ಕ್ರಮಾಂಕದ ಸೂಚನೆಯು ಸ್ಪಷ್ಟವಾಗಿ ಮಂಗಳಸೂತ್ರವನ್ನು ಧರಿಸುವುದನ್ನು ನಿಷೇಧಿಸಿದೆ. ಅಲ್ಲದೆ, ಯಾವುದೇ ಧರ್ಮಕ್ಕೆ ಸಂಬಂಧಿಸಿದ ಸಂಕೇತಗಳನ್ನು ಧರಿಸದಂತೆ ಉಲ್ಲೇಖಿಸಿರುವುದು ಬ್ರಾಹ್ಮಣ ಸಮುದಾಯದವರು ಧರಿಸುವ ಜನಿವಾರ ಮತ್ತು ವೀರಶೈವರು ಧರಿಸುವ ಕರಡಿಗೆಯಂತಹ ಧಾರ್ಮಿಕ ಆಚರಣೆಗಳ ಬಗ್ಗೆಯೂ ಗೊಂದಲವನ್ನು ಸೃಷ್ಟಿಸಿದೆ.
ಈ ಹಿಂದೆ ರಾಜ್ಯದಲ್ಲಿ ನಡೆದ ನೇಮಕಾತಿ ಪರೀಕ್ಷೆಯೊಂದರಲ್ಲಿ ಮಂಗಳಸೂತ್ರವನ್ನು ತೆಗೆದಿಟ್ಟು ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ರೈಲ್ವೆ ಇಲಾಖೆಯ ಈ ಹೊಸ ನಿಯಮವು ಮತ್ತೊಂದು ವಿವಾದಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.
ಧಾರ್ಮಿಕ ಸಂಕೇತಗಳನ್ನು ಧರಿಸದಂತೆ ನೀಡಿರುವ ಸೂಚನೆಗೆ ವಿಶ್ವ ಹಿಂದೂ ಪರಿಷತ್ (ವಿಹಿಂಪ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರೈಲ್ವೆ ಇಲಾಖೆಯ ಈ ಧೋರಣೆಯನ್ನು ಖಂಡಿಸಿರುವ ವಿಹಿಂಪ, ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಕ್ರಮ ಎಂದು ಕಿಡಿಕಾರಿದೆ.
CBSE ಪಠ್ಯದಿಂದ ಮೊಘಲರು, ದೆಹಲಿ ಸುಲ್ತಾನರಿಗೆ ಗೇಟ್ಪಾಸ್!
ಈ ಕುರಿತು ಪ್ರತಿಕ್ರಿಯಿಸಿರುವ ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್, “ಹಿಂದೂಗಳು ಅವರ ಧಾರ್ಮಿಕ ಚಿಹ್ನೆಗಳಾದ ಮಂಗಳಸೂತ್ರ ಮತ್ತು ಜನಿವಾರವನ್ನು ತೆಗೆಯಲು ಹೇಳಿದರೆ ಅದು ಖಂಡಿತವಾಗಿಯೂ ಸರಿಯಲ್ಲ. ಈ ರೀತಿಯ ಧಾರ್ಮಿಕ ವಿರೋಧಿ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ಮತ್ತು ಸಂಸದರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಈ ಅಂಶವನ್ನು ಕೈಬಿಡಬೇಕು. ಪರೀಕ್ಷೆಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಪರೀಕ್ಷಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
ಏಪ್ರಿಲ್ 29 ರಂದು ಮಂಗಳೂರಿನ ಬೋಂದೆಲ್ನ ಮಣೇಲ್ ಶ್ರೀನಿವಾಸ್ ನಾಯಕ್ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ಈ ಪರೀಕ್ಷೆ ನಡೆಯಲಿದ್ದು, ರೈಲ್ವೆ ಇಲಾಖೆಯ ಈ ನಿಯಮವು ಪರೀಕ್ಷೆಗೆ ಹಾಜರಾಗುವ ಮಹಿಳೆಯರು ಮತ್ತು ಧಾರ್ಮಿಕ ಆಚರಣೆಗಳನ್ನು ಪಾಲಿಸುವ ಪುರುಷ ಅಭ್ಯರ್ಥಿಗಳಿಗೆ ತೀವ್ರ ನಿರಾಶೆಯನ್ನುಂಟು ಮಾಡಿದೆ.
ಈ ಹಿಂದೆ ನಡೆದ ಸಿಇಟಿ ವಿವಾದದ ಮಾದರಿಯಲ್ಲಿಯೇ ಇದೀಗ ರೈಲ್ವೆ ನೇಮಕಾತಿ ಪರೀಕ್ಷೆಯ ನಿಯಮಾವಳಿಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳನ್ನು ಪಾಲಿಸುವವರ ಹಕ್ಕುಗಳನ್ನು ಕಡೆಗಣಿಸಿ ಇಂತಹ ನಿಯಮಗಳನ್ನು ಜಾರಿಗೊಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಇದೀಗ ಎದ್ದಿವೆ. ರೈಲ್ವೆ ಇಲಾಖೆ ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.