
Rakesh Poojary Death: ಯಾರನ್ನು ನೋಡಿದರೆ ನಗು ಉಕ್ಕಿ ಬರುತ್ತಿತ್ತೋ, ತಮ್ಮ ಹಾಸ್ಯದ ಚಟಾಕಿಯಿಂದ ಎಲ್ಲರ ಮನ ಗೆದ್ದಿದ್ದ ‘ಕಾಮಿಡಿ ಕಿಲಾಡಿಗಳು’ (Comedy Khiladigalu) ಖ್ಯಾತಿಯ ನಟ ರಾಕೇಶ್ ಪೂಜಾರಿ (Rakesh Poojary) ಅವರು ಇನ್ನಿಲ್ಲ. ಈ ಸುದ್ದಿ ನಂಬಲು ಕಷ್ಟವಾದರೂ, ಅದು ಸತ್ಯ. ಆರೋಗ್ಯವಾಗಿದ್ದ ರಾಕೇಶ್ ಅವರು ಕೇವಲ ಯುವ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ರಾಕೇಶ್ ಅವರಿಗೆ ಹೃದಯಾಘಾತ ಸಂಭವಿಸಿದೆ. ಇಂದು (ಮೇ 12) ಮುಂಜಾನೆ ಸುಮಾರು 2 ಗಂಟೆಗೆ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ನಟ ಶಿವರಾಜ್ ಕೆ.ಆರ್. ಪೇಟೆ ಅವರು ರಾಕೇಶ್ ಪೂಜಾರಿ ಅವರ ನಿಧನದ ಸುದ್ದಿಯನ್ನು ಖಚಿತಪಡಿಸಿದ್ದು, ಅವರ ಆಪ್ತ ಬಳಗವು ಈ ಆಘಾತಕಾರಿ ಸುದ್ದಿಯಿಂದ ತೀವ್ರ ದುಃಖಿತವಾಗಿದೆ. ಎಲ್ಲರೂ ಕಂಬನಿ ಮಿಡಿಯುತ್ತಿದ್ದು, ಹೃದಯಾಘಾತದಿಂದ ಅವರ ಸಾವು ಸಂಭವಿಸಿರುವುದು ಇನ್ನಷ್ಟು ಆಘಾತವನ್ನುಂಟು ಮಾಡಿದೆ.
‘ವಿಶ್ವರೂಪ್’ ಎಂದೇ ಜನಪ್ರಿಯರಾಗಿದ್ದ ರಾಕೇಶ್ ಪೂಜಾರಿ ಅವರು ಹಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದರು. ಆದರೆ, ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು’ ವೇದಿಕೆಯು ಅವರ ಜೀವನಕ್ಕೆ ಮಹತ್ತರ ತಿರುವು ನೀಡಿತು. ಅವರು ‘ಕಾಮಿಡಿ ಕಿಲಾಡಿಗಳು’ ಮೂರನೇ ಸೀಸನ್ನ ವಿನ್ನರ್ ಆಗಿದ್ದರು. ಅದಕ್ಕೂ ಮುನ್ನ, 2018 ರಲ್ಲಿ ‘ಕಾಮಿಡಿ ಕಿಲಾಡಿಗಳು ಸೀಸನ್ 2’ ರಲ್ಲಿ ರನ್ನರ್ ಅಪ್ ತಂಡದಲ್ಲಿದ್ದರು. ರಂಗಭೂಮಿ ಮತ್ತು ಕಿರುತೆರೆಯಲ್ಲಿ ತಮ್ಮ ಹಾಸ್ಯದ ಮೂಲಕ ಮನೆಮಾತಾಗಿದ್ದ ರಾಕೇಶ್ ಅವರು ಕನ್ನಡದ ‘ಪೈಲ್ವಾನ್’ ಮತ್ತು ‘ಇದು ಎಂಥಾ ಲೋಕವಯ್ಯ’ ಚಿತ್ರಗಳಲ್ಲಿಯೂ ನಟಿಸಿದ್ದರು. ತುಳು ಭಾಷೆಯ ‘ಪೆಟ್ಕಮ್ಮಿ’ ಮತ್ತು ‘ಅಮ್ಮೆರ್ ಪೊಲೀಸ್’ ಮೊದಲಾದ ಸಿನಿಮಾಗಳಲ್ಲಿಯೂ ಅವರು ತಮ್ಮ ಅಭಿನಯದ ಛಾಪು ಮೂಡಿಸಿದ್ದರು.
ಇದನ್ನೂ ಓದಿ: ಹೋಗಿ ಬಾ ಅಪ್ಪ, 7 ದಿನದ ಕಂದಮ್ಮನ ಕಣ್ಣೀರು! ಗಡಿಗೆ ಧಾವಿಸಿದ ಯೋಧನ ಭಾವುಕ ಮಾತುಗಳು!
ಈ ಕುರಿತು ಮಾತನಾಡಿದ ಹಿರಿಯ ನಟ ಗೋವಿಂದೇ ಗೌಡ ಅವರು, ರಾಕೇಶ್ ಅವರಿಗೆ ಪ್ಲೇಟ್ಲೆಟ್ಸ್ ಕಡಿಮೆಯಿತ್ತು. ಇತ್ತೀಚೆಗಷ್ಟೇ ‘ಕಾಂತಾರ’ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಬಂದಿದ್ದರು. ಆ ಬಳಿಕ ಸಂಜೆ ಸುಸ್ತು ಎಂದು ಹೇಳುತ್ತಿದ್ದರು. ಮಧ್ಯರಾತ್ರಿ ಹೃದಯಾಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ರಾಕೇಶ್ ಪೂಜಾರಿ ಅವರ ಅಕಾಲಿಕ ನಿಧನವು ಕನ್ನಡ ಚಿತ್ರರಂಗ ಮತ್ತು ಅವರ ಅಭಿಮಾನಿಗಳಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ತಮ್ಮ ಹಾಸ್ಯದ ಮೂಲಕ ಎಲ್ಲರ ಮುಖದಲ್ಲಿ ನಗು ಮೂಡಿಸುತ್ತಿದ್ದ ಕಲಾವಿದ ಇಂದು ನಮ್ಮೊಂದಿಗೆ ಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರತಿಯೊಬ್ಬರೂ ಪ್ರಾರ್ಥಿಸುತ್ತಿದ್ದಾರೆ. ರಾಕೇಶ್ ಅವರ ಹಾಸ್ಯ ಮತ್ತು ಅವರ ನೆನಪುಗಳು ಎಂದಿಗೂ ನಮ್ಮೊಂದಿಗೆ ಇರುತ್ತವೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.