
ಇತ್ತೀಚೆಗೆ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿದ ವಿವಾದ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ಘಟನೆಯ ಬೆನ್ನಲ್ಲೇ, ನಾಳೆ (ಏಪ್ರಿಲ್ 29) ನಡೆಯಲಿರುವ ರೈಲ್ವೆ ಇಲಾಖೆಯ ನೇಮಕಾತಿ ಪರೀಕ್ಷೆಗೆ ಹಾಜರಾಗುವವರು ಧಾರ್ಮಿಕ ಸಂಕೇತಗಳು ಮತ್ತು ಮಂಗಳಸೂತ್ರವನ್ನು ತೆಗೆದು ಬರಬೇಕು ಎಂಬ ಸೂಚನೆ ಪ್ರವೇಶ ಪತ್ರದಲ್ಲಿ ಉಲ್ಲೇಖಿತವಾಗಿದ್ದು, ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಇದೀಗ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ವಿ. ಸೋಮಣ್ಣ ಅವರು, ಈ ಗೊಂದಲವನ್ನು ನಿವಾರಿಸಲಾಗಿದೆ ಎಂದು ತಿಳಿಸಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ಅವರು, ಏಪ್ರಿಲ್ 28, 29 ಮತ್ತು 30 ರಂದು ನಡೆಯಲಿರುವ ರೈಲ್ವೆ ನೇಮಕಾತಿ ಮಂಡಳಿಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಗೆ ಅಭ್ಯರ್ಥಿಗಳು ಜನಿವಾರ ಮತ್ತು ಮಂಗಳಸೂತ್ರ ತೆಗೆದು ಪರೀಕ್ಷೆ ಬರೆಯಬೇಕೆಂಬ ನಿಯಮ ಉಲ್ಲೇಖಿಸಲಾಗಿದೆಯೆಂದು ದೂರುಗಳು ಬಂದಿದ್ದವು. ಈ ಬಗ್ಗೆ ಸಂಸದರು, ಶಾಸಕರು ಮತ್ತು ವಿವಿಧ ಸಂಘಟನೆಗಳು ತಮ್ಮ ಗಮನಕ್ಕೆ ತಂದಿದ್ದರು ಎಂದು ಅವರು ವಿವರಿಸಿದರು.
ಇದರ ಗಂಭೀರತೆಯನ್ನು ಅರಿತ ವಿ. ಸೋಮಣ್ಣ ಅವರು ತಕ್ಷಣವೇ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಚರ್ಚಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. “ಅಶ್ವಿನಿ ವೈಷ್ಣವ್ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಗೊಂದಲ ನಿವಾರಿಸಲಾಗಿದೆ. ಜನಿವಾರ ಮತ್ತು ಮಂಗಳಸೂತ್ರ ಧರಿಸಿ ಪರೀಕ್ಷೆ ಬರೆಯಲು ಬಂದರೆ ಯಾವುದೇ ತೊಂದರೆ ನೀಡಬಾರದೆಂದು ಸೂಚನೆ ನೀಡಲಾಗಿದೆ. ಅಭ್ಯರ್ಥಿಗಳು ಇತರೆ ನಿಯಮಗಳನ್ನು ಪಾಲಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ತಿಳಿಸಲಾಗಿದೆ. ಅಭ್ಯರ್ಥಿಗಳು ಸಹ ನಿಯಮಾನುಸಾರ ಪರೀಕ್ಷೆ ಬರೆಯಲು ಮನವಿ ಮಾಡುತ್ತೇನೆ. ಈ ಬಗ್ಗೆ ಯಾವುದೇ ಗೊಂದಲಗಳಿಗೆ ಒಳಗಾಗಬಾರದೆಂದು ಕೋರುತ್ತೇನೆ” ಎಂದು ವಿ. ಸೋಮಣ್ಣ ಅವರು ಸ್ಪಷ್ಟಪಡಿಸಿದರು.
ರೈಲ್ವೆ ಇಲಾಖೆಯ ಪರೀಕ್ಷೆಗೆ ಈ ನಿಬಂಧನೆಗಳು ಹಲವು ವರ್ಷಗಳಿಂದ ಇದ್ದರೂ, ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ ಇದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವಿ. ಸೋಮಣ್ಣ ಅವರು, ಜನಿವಾರ ಮತ್ತು ಮಂಗಳಸೂತ್ರ ತೆಗೆಯದಂತೆ ಇಂದೇ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದರು. ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಮಾಂಗಲ್ಯ ಮತ್ತು ಜನಿವಾರ ತೆಗೆಯುವ ಹಿಂದಿನ ಆದೇಶವನ್ನು ಹಿಂಪಡೆದಿದ್ದಾರೆ. ಈ ಹೊಸ ನಿಯಮವು ದೇಶಾದ್ಯಂತ ಅನ್ವಯವಾಗಲಿದೆ ಎಂದು ವಿ. ಸೋಮಣ್ಣ ಅವರು ಸಂತಸ ವ್ಯಕ್ತಪಡಿಸಿದರು.
ಜನಿವಾರ ಆಯ್ತು, ರೈಲ್ವೆ ಪರೀಕ್ಷೆಗೆ ಮಂಗಳಸೂತ್ರಕ್ಕೂ ನಿರ್ಬಂಧ!
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ ವಿ. ಸೋಮಣ್ಣ ಅವರು, ಅಭ್ಯರ್ಥಿಗಳಿಗೆ ಇದ್ದ ಗೊಂದಲ ನಿವಾರಣೆಯಾಗಿದೆ ಎಂದು ತಿಳಿಸಿದರು. “ಸುಮಾರು ವರ್ಷಗಳಿಂದ ಇದ್ದ ಕಟ್ಟುಪಾಡುಗಳನ್ನು ತೆಗದುಹಾಕಲಾಗಿದೆ. ಈ ಹಿಂದೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅಪಚಾರವಾಗಿದ್ದರೆ ಕ್ಷಮೆ ಕೋರುತ್ತೇನೆ” ಎಂದು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಹೇಳಿದರು.
ವಿ. ಸೋಮಣ್ಣ ಅವರ ಈ ಸ್ಪಷ್ಟನೆಯಿಂದ ನಾಳೆ ನಡೆಯಲಿರುವ ರೈಲ್ವೆ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ, ಅದರಲ್ಲೂ ವಿಶೇಷವಾಗಿ ಧಾರ್ಮಿಕ ಸಂಕೇತಗಳನ್ನು ಧರಿಸುವವರಿಗೆ ಮತ್ತು ವಿವಾಹಿತ ಮಹಿಳೆಯರಿಗೆ ದೊಡ್ಡ ನಿರಾಳೆಯನ್ನು ತಂದಿದೆ. ಕೇಂದ್ರ ಸರ್ಕಾರದ ಈ ಸಕಾರಾತ್ಮಕ ಸ್ಪಂದನೆಯು ಅಭ್ಯರ್ಥಿಗಳ ಆತಂಕವನ್ನು ದೂರ ಮಾಡಿದೆ.