
ಬೀದರ್/ಶಿವಮೊಗ್ಗ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎರಡು ಪ್ರತ್ಯೇಕ ಘಟನೆಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. ಬೀದರ್ನಲ್ಲಿ ಜನಿವಾರ ಧರಿಸಿದ್ದ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದ್ದು, ಶಿವಮೊಗ್ಗದಲ್ಲಿ ವಿದ್ಯಾರ್ಥಿಯ ಜನಿವಾರವನ್ನು ತುಂಡರಿಸಿದ್ದಾರೆ. ಈ ಘಟನೆಗಳು ರಾಜ್ಯಾದ್ಯಂತ ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದು, ವ್ಯಾಪಕ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಈ ಕುರಿತು ತೀವ್ರ ವಿಷಾದ ವ್ಯಕ್ತಪಡಿಸಿರುವ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಇದು ಧಾರ್ಮಿಕ ದ್ವೇಷ ಮತ್ತು ಒಂದು ನಿರ್ದಿಷ್ಟ ಸಮುದಾಯವನ್ನು ತುಳಿಯುವ ಹುನ್ನಾರ ಎಂದು ಕಿಡಿಕಾರಿದ್ದಾರೆ. “ಧರ್ಮವೇ ಆಳುವ ಕಾಲ ಉತ್ತಮ. ಧರ್ಮವಿಲ್ಲದಿದ್ದರೂ ಧಾರ್ಮಿಕ ಸಹಿಷ್ಣುತೆಯಿಂದ ಬದುಕಬಹುದು. ಆದರೆ ಈಗ ಬರುತ್ತಿರುವ ಕಾಲದಲ್ಲಿ ಧಾರ್ಮಿಕ ಸಹಬಾಳ್ವೆಗೂ ಅವಕಾಶವಿಲ್ಲದಂತಾಗಿದೆ. ಜನಿವಾರದಿಂದ ಆಗುವ ತೊಂದರೆಯಾದರೂ ಏನು? ಇದು ಕೇವಲ ದ್ವೇಷ ಮತ್ತು ಒಂದು ಜಾತಿಯನ್ನು ಅವಮಾನಿಸುವ ಮನಸ್ಥಿತಿ” ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 21 ದೇವಾಲಯಗಳ ಒಂದು ಟನ್ ಚಿನ್ನ ಕರಗಿಸಿದ ಸರ್ಕಾರ
ಪರೀಕ್ಷೆಯಂತಹ ಸೂಕ್ಷ್ಮ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಕ್ರೌರ್ಯ ಮೆರೆಯುವುದು, ದಬ್ಬಾಳಿಕೆ ಮಾಡುವುದು ಮತ್ತು ಜನಿವಾರ ಕಿತ್ತುಕೊಳ್ಳುವುದು ಅಮಾನವೀಯ ಎಂದು ಸ್ವಾಮೀಜಿಗಳು ಖಂಡಿಸಿದ್ದಾರೆ. ಜನಿವಾರವನ್ನು ಕಸಿದುಕೊಂಡರೆ ಅಥವಾ ಪರೀಕ್ಷೆಗೆ ಅವಕಾಶ ನಿರಾಕರಿಸಿದರೆ ವಿದ್ಯಾರ್ಥಿಗಳಿಗೆ ತಮ್ಮ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಯಾವ ಭಾವನೆ ಉಳಿಯಬಹುದು ಎಂದು ಶ್ರೀಗಳು ಪ್ರಶ್ನಿಸಿದ್ದಾರೆ.
“ಇಂತಹ ಅಧಿಕಾರಿಗಳು ಕೇವಲ ಅಧಿಕಾರದ ಗರ್ವದಿಂದ ವರ್ತಿಸುತ್ತಿದ್ದಾರೆ. ಬ್ರಾಹ್ಮಣ ಸಮುದಾಯ ಇದನ್ನು ಸಹಿಸಬಾರದು. ನಾವು ಈಗ ಎಚ್ಚೆತ್ತುಕೊಳ್ಳದಿದ್ದರೆ, ನಾಳೆ ಈ ದೇಶದಲ್ಲಿ ನಮಗೆ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಹಾಗಾಗಿ ಎಲ್ಲರೂ ಸಂಘಟಿತರಾಗಿ ಈ ಅನ್ಯಾಯದ ವಿರುದ್ಧ ತೀವ್ರವಾಗಿ ಪ್ರತಿಭಟಿಸಬೇಕು. ಇದು ಕೇವಲ ಅಗತ್ಯವಲ್ಲ, ಅನಿವಾರ್ಯ ಕೂಡ” ಎಂದು ಅವರು ಕರೆ ನೀಡಿದ್ದಾರೆ.
ಇದನ್ನೂ ಓದಿ: ಜನಿವಾರ ಪ್ರಕರಣದಲ್ಲಿ ನಾಲ್ವರ ಅಮಾನತು
ಜನಿವಾರ ಕೇವಲ ಬ್ರಾಹ್ಮಣರ ಸಂಕೇತವಲ್ಲ, ಇದನ್ನು ಬೇರೆ ಸಮುದಾಯದವರೂ ಗೌರವದಿಂದ ಧರಿಸುತ್ತಾರೆ. ವೀರಶೈವರು ಲಿಂಗವನ್ನು ಸೂತ್ರದ ಮೂಲಕ ಧಾರಣೆ ಮಾಡುತ್ತಾರೆ. ಹೀಗಾದರೆ ಮುಂದೊಂದು ದಿನ ಎಲ್ಲ ಧಾರ್ಮಿಕ ಆಚರಣೆಗಳಿಗೂ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಸ್ವಾಮೀಜಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಚಿಹ್ನೆಯನ್ನು ತೆಗೆಯಲು ಹೇಳಿದರೂ ಪರೀಕ್ಷೆಗೆ ಹಾಜರಾಗದೆ ತಮ್ಮ ಧರ್ಮನಿಷ್ಠೆಯನ್ನು ಮೆರೆದ ವಿದ್ಯಾರ್ಥಿಯನ್ನು ಶ್ರೀ ರಾಮಚಂದ್ರಾಪುರ ಮಠದ ಸ್ವಾಮೀಜಿಗಳು ಅಭಿನಂದಿಸಿದ್ದಾರೆ. ಜನಿವಾರದ ಕಾರಣಕ್ಕೆ ತೊಂದರೆಯಾದ ವಿದ್ಯಾರ್ಥಿಗಳಿಗೆ ಮಠವು ಸದಾ ಸಹಾಯಹಸ್ತ ನೀಡಲು ಸಿದ್ಧವಿದೆ. ಸಂತ್ರಸ್ತರು ನೇರವಾಗಿ ಮಠವನ್ನು ಸಂಪರ್ಕಿಸಬಹುದು ಎಂದು ಶ್ರೀಗಳು ತಿಳಿಸಿದ್ದಾರೆ.
ಅಂತಿಮವಾಗಿ, ಭಾರತೀಯರು ಮತ್ತು ವಿಶೇಷವಾಗಿ ಬ್ರಾಹ್ಮಣ ಸಮುದಾಯ ಎಚ್ಚೆತ್ತುಕೊಳ್ಳಬೇಕು. ಈ ಅನ್ಯಾಯದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಾದ ಸಮಯ ಇದೀಗ ಬಂದಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಸ್ವಾಮೀಜಿಗಳು ಕರೆ ನೀಡಿದ್ದಾರೆ.
Sri Rama is a seasoned journalist with four years of experience, specializing in capturing and analyzing the latest news and trending stories. He brings extensive expertise in news collection, reporting, and interviewing across a broad spectrum of topics, including politics.