ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ. ಈ ಹೇಯ ಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದು, ಈ ಘೋರ ಅಪರಾಧ ಎಸಗಿದವರನ್ನು ಕಾನೂನಿನ ಪ್ರಕಾರ ಶಿಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟನೆಯ ಬಗ್ಗೆ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. “ಪಹಲ್ಗಾಮ್ನಲ್ಲಿ ನಡೆದ ಹೇಯ ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಅವರು ಬರೆದಿದ್ದಾರೆ.
ಗಾಯಗೊಂಡವರಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ತ್ವರಿತವಾಗಿ ಒದಗಿಸಲಾಗುವುದು. ಈ ಘೋರ ಕೃತ್ಯದಲ್ಲಿ ಭಾಗಿಯಾದವರನ್ನು ಕಾನೂನಿನ ಪ್ರಕಾರ ಶಿಕ್ಷಿಸಲಾಗುವುದು. ಘಟನೆಗೆ ಕಾರಣರಾದವರನ್ನು ಖಂಡಿತಾ ಬಿಡುವುದಿಲ್ಲ. ಅವರ ದುಷ್ಟ ಉದ್ದೇಶಗಳು ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ. ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟವು ಅಚಲವಾಗಿದೆ ಮತ್ತು ಇನ್ನಷ್ಟು ಬಲಗೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ಅಟ್ಟಹಾಸ! ಕನ್ನಡಿಗ ಬಲಿ!
ಸುಮಾರು ಆರರಿಂದ ಏಳು ಭಯೋತ್ಪಾದಕರು ಎರಡು ಗುಂಪುಗಳಾಗಿ ವಿಂಗಡಿಸಿಕೊಂಡು ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದಾರೆ. ಬೇರೆ ಬೇರೆ ಸ್ಥಳಗಳಲ್ಲಿದ್ದ ಪ್ರವಾಸಿಗರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ ಅವರ ಜೀವವನ್ನು ಬಲಿ ತೆಗೆದುಕೊಂಡಿದ್ದಾರೆ. ಈ ಕೃತ್ಯವನ್ನು ಇಡೀ ದೇಶವು ತೀವ್ರವಾಗಿ ಖಂಡಿಸುತ್ತಿದೆ.
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
