
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕುಡುಪು ಎಂಬಲ್ಲಿ ನಡೆದ ಕ್ರಿಕೆಟ್ ಪಂದ್ಯದ ವೇಳೆ ಅಹಿತಕರ ಘಟನೆಯೊಂದು ಸಂಭವಿಸಿದೆ. ಪಂದ್ಯದ ವೇಳೆ ಗಲಾಟೆಯುಂಟಾಗಿ ಗುಂಪೊಂದು ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಆತ ಮೃತಪಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಈವರೆಗೆ 20 ಮಂದಿಯನ್ನು ಬಂಧಿಸಿದ್ದಾರೆ.
ಮೃತಪಟ್ಟ ಯುವಕನನ್ನು ಕೇರಳದ (Kerala) ವಯನಾಡಿನ ಮನವಂತವಾಡಿಯ ಪುಲ್ಪಲ್ಲಿ ನಿವಾಸಿ ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದೆ. ಕೇರಳದಿಂದ ಆಗಮಿಸಿದ ಆತನ ಸಂಬಂಧಿಕರು ಮೃತದೇಹವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅವರಿಗೆ ಹಸ್ತಾಂತರಿಸಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಮೊಹಮ್ಮದ್ ಅಶ್ರಫ್ ಕ್ರಿಕೆಟ್ ಪಂದ್ಯದ ವೇಳೆ “ಪಾಕಿಸ್ತಾನ ಜಿಂದಾಬಾದ್” ಎಂದು ಘೋಷಣೆ ಕೂಗಿದ್ದ ಎನ್ನಲಾಗಿದೆ. ಇದರಿಂದ ಕೆರಳಿದ ಸ್ಥಳೀಯ ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಪೊಲೀಸರ ಹೇಳಿಕೆ:
ಘಟನೆಯ ಕುರಿತು ಮಾಹಿತಿ ನೀಡಿದ ಮಂಗಳೂರು ಪೊಲೀಸರು, “ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಮೊಹಮ್ಮದ್ ಅಶ್ರಫ್ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾನೆ. ಈ ಕಾರಣಕ್ಕೆ ಆತನ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪವಿದೆ. ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ 20 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ವಿಚಾರಣೆಗೊಳಪಡಿಸಲಾಗಿದೆ. ಹೆಚ್ಚಿನ ತನಿಖೆಯ ನಂತರ ಘಟನೆಯ ಕುರಿತು ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಾನು ಭಾರತವನ್ನು ದ್ವೇಷಿಸುತ್ತೇನೆ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ! ವೈದ್ಯೆ ಅಫೀಫಾ ಫಾತೀಮಾ ವಿವಾದಾತ್ಮಕ ಪೋಸ್ಟ್
ಗೃಹ ಸಚಿವ ಪರಮೇಶ್ವರ್ ಅವರ ಪ್ರತಿಕ್ರಿಯೆ:
ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು, “ಬೇರೆ ರಾಜ್ಯದ ವ್ಯಕ್ತಿಯೊಬ್ಬನನ್ನು ಗುಂಪು ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸ್ಥಳೀಯ ಕ್ರಿಕೆಟ್ ಪಂದ್ಯದ ವೇಳೆ ಆತ ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗಿದ್ದಾಗ ಅಲ್ಲಿದ್ದ ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ. ಥಳಿತದಿಂದ ಗಾಯಗೊಂಡ ವ್ಯಕ್ತಿ ನಂತರ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದ ಪೂರ್ಣ ವರದಿ ಇನ್ನೂ ಕೈಸೇರಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಅದರಲ್ಲೂ ಮಂಗಳೂರಿನಲ್ಲಿ ಯಾವುದೇ ಗಲಭೆ ನಡೆದರೂ ಕೋಮು ಬಣ್ಣ ಹಚ್ಚಲಾಗುತ್ತದೆ. ಹೀಗಾಗಿ ಘಟನೆಯ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆಯ ಹಿನ್ನೆಲೆ:
ಏಪ್ರಿಲ್ 27 ರ ಭಾನುವಾರದಂದು ಮಂಗಳೂರಿನ ಕುಡುಪು ಎಂಬಲ್ಲಿ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು. ಮಂಗಳೂರಿಗೆ ವಲಸೆ ಕಾರ್ಮಿಕನಾಗಿ ಬಂದಿದ್ದ ಮೊಹಮ್ಮದ್ ಅಶ್ರಫ್ ಈ ಪಂದ್ಯವನ್ನು ವೀಕ್ಷಿಸಲು ತೆರಳಿದ್ದ. ಆ ಸಂದರ್ಭದಲ್ಲಿ ಆತ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಸ್ಥಳೀಯರು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದೇಹದ ಸೂಕ್ಷ್ಮ ಭಾಗಗಳಿಗೆ ಗಂಭೀರವಾದ ಗಾಯಗಳಾಗಿದ್ದರಿಂದ ಅಶ್ರಫ್ ಮರುದಿನ ಮೃತಪಟ್ಟಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, “ಇದು ಒಂದು ಕ್ರೂರ ಮತ್ತು ಅಮಾನವೀಯ ಕೊಲೆ. ಪೊಲೀಸರು ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿದ್ದಾರೆ.
ಈ ಘಟನೆಯು ಮಂಗಳೂರಿನಲ್ಲಿ ತೀವ್ರ ಆಘಾತವನ್ನುಂಟು ಮಾಡಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.