
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭಯೋತ್ಪಾದಕ ದಾಳಿಯಲ್ಲಿ (Pahalgam Terror Attack) ಮೃತಪಟ್ಟವರ ಸಂಖ್ಯೆ 24ಕ್ಕೂ ಹೆಚ್ಚಿದೆ. ಈ ದುರಂತದಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಸೇರಿದಂತೆ ಹಲವು ಪ್ರವಾಸಿಗರು ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ದಾಳಿಯಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡ ಮಗಳೊಬ್ಬಳು ಆಘಾತಕಾರಿ ಘಟನೆಯ ಬಗ್ಗೆ ಮಾತನಾಡಿದ್ದಾಳೆ.
ಉಗ್ರರು ಬಂದಾಗ ಅವರ ಕುಟುಂಬವು ಭಯದಿಂದ ಟೆಂಟ್ನೊಳಗೆ ಕುಳಿತಿತ್ತು. ಆ ವೇಳೆ 54 ವರ್ಷದ ಸಂತೋಷ್ ಜಗದಲೆ ಅವರನ್ನು ಬಲವಂತವಾಗಿ ಹೊರಗೆ ಎಳೆದುಕೊಂಡು ಹೋಗಿ ಇಸ್ಲಾಮಿಕ್ ಸ್ತೋತ್ರಗಳನ್ನು ಪಠಿಸುವಂತೆ ಒತ್ತಾಯಿಸಿದ್ದರು ಎಂದು ಮಗಳು ತಿಳಿಸಿದ್ದಾಳೆ.
“ಅವರಿಗೆ ಸಾಧ್ಯವಾಗದಿದ್ದಾಗ ಅವರ ಕಿವಿಯ ಮೇಲೆ ಮೂರು ಬಾರಿ ಗುಂಡು ಹಾರಿಸಲಾಯಿತು. ಒಮ್ಮೆ ತಲೆಗೆ, ನಂತರ ಕಿವಿಯ ಹಿಂದೆ ಮತ್ತೊಂದು ಹಾಗೂ ಬೆನ್ನಿಗೆ ಒಂದು ಗುಂಡು ತಗುಲಿತ್ತು.” ಮಂಗಳವಾರ ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ದಾಳಿಯ ಕರಾಳ ಅನುಭವವನ್ನು ಪುಣೆಯ ಉದ್ಯಮಿಯ ಮಗಳು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾರೆ. ಆಕೆ ತನ್ನ 54 ವರ್ಷದ ತಂದೆ ಸಂತೋಷ್ ಜಗದಲೆ ಅವರನ್ನು ಉಗ್ರರು ಇಸ್ಲಾಮಿಕ್ ಸ್ತೋತ್ರ ಪಠಿಸುವಂತೆ ಒತ್ತಾಯಿಸಿದಾಗ ಅವರು ನಿರಾಕರಿಸಿದ್ದರಿಂದ ಈ ರೀತಿ ಗುಂಡಿನ ದಾಳಿ ನಡೆಸಿದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಿನ್ನನ್ನು ಬಿಡ್ತೇನೆ, ಮೋದಿಗೆ ಹೋಗಿ ಹೇಳು! ಪಹಲ್ಗಾಮ್ನಲ್ಲಿ ಹಿಂದೂಗಳ ಹತ್ಯೆ!
ಆಕೆಯ ತಂದೆ ನೆಲಕ್ಕೆ ಬಿದ್ದ ನಂತರ, ಬಂದೂಕುಧಾರಿಗಳು ಆಕೆಯ ಪಕ್ಕದಲ್ಲೇ ಮಲಗಿದ್ದ ಆಕೆಯ ಚಿಕ್ಕಪ್ಪನ ಬೆನ್ನಿಗೆ ಪದೇ ಪದೇ ಗುಂಡು ಹಾರಿಸಿದರು. “ನಮ್ಮದು ಪೋಷಕರು ಸೇರಿದಂತೆ ಐದು ಗುಂಪುಗಳಿತ್ತು. ನಾವು ಪಹಲ್ಗಾಮ್ ಬಳಿಯ ಬೈಸರನ್ ಕಣಿವೆಯಲ್ಲಿದ್ದೆವು ಮತ್ತು ಗುಂಡಿನ ದಾಳಿ ಪ್ರಾರಂಭವಾದಾಗ ಮಿನಿ ಸ್ವಿಟ್ಜರ್ಲೆಂಡ್ ಎಂಬ ಸ್ಥಳದಲ್ಲಿದ್ದೆವು” ಎಂದು ಆಕೆ ವಿವರಿಸಿದ್ದಾರೆ. ಗುಂಡಿನ ದಾಳಿಯ ಭೀಕರತೆಯನ್ನು ನೆನೆದು ಆಕೆ ಕಣ್ಣೀರಿಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದ್ದು, ಮೃತಪಟ್ಟವರಲ್ಲಿ ಬಹುಪಾಲು ಮಂದಿ ಪ್ರವಾಸಿಗರಾಗಿದ್ದಾರೆ. ಪುಣೆಯ ಉದ್ಯಮಿ ಸಂತೋಷ್ ಜಗದಲೆ ಅವರ ಮಗಳು ತಂದೆಯ ಸಾವಿನ ಆಘಾತದಿಂದ ಇನ್ನೂ ಹೊರಬಂದಿಲ್ಲ. ತನ್ನ ತಂದೆ ಮತ್ತು ಚಿಕ್ಕಪ್ಪ ಬದುಕಿದ್ದಾರೋ ಇಲ್ಲವೋ ಎಂಬ ಸ್ಪಷ್ಟ ಮಾಹಿತಿ ಆಕೆಗಿಲ್ಲ. ಗುಂಡಿನ ದಾಳಿಯ ಸಂದರ್ಭದಲ್ಲಿ ಆಕೆಯ ತಾಯಿ ಮತ್ತು ಮತ್ತೊಬ್ಬ ಮಹಿಳಾ ಸಂಬಂಧಿಯನ್ನು ರಕ್ಷಿಸಲಾಗಿದ್ದು, ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿ ಅವರನ್ನು ಪಹಲ್ಗಾಮ್ ಕ್ಲಬ್ಗೆ ಸ್ಥಳಾಂತರಿಸಿದ್ದಾರೆ. ಗಾಯಗೊಂಡವರು ಮತ್ತು ಮೃತಪಟ್ಟವರ ಬಗ್ಗೆ ನಿಖರವಾದ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಹತ್ತಿರದ ಬೆಟ್ಟದಿಂದ ಇಳಿದು ಬರುತ್ತಿದ್ದಾಗ ಸ್ಥಳೀಯ ಪೊಲೀಸರ ಸಮವಸ್ತ್ರವನ್ನು ಹೋಲುವ ಬಟ್ಟೆಗಳನ್ನು ಧರಿಸಿದ್ದ ವ್ಯಕ್ತಿಗಳು ಗುಂಡು ಹಾರಿಸುವ ಶಬ್ದ ಕೇಳಿಸಿತು. ತಕ್ಷಣವೇ ರಕ್ಷಣೆಗಾಗಿ ನಾವು ಟೆಂಟ್ನೊಳಗೆ ಓಡಿ ಹೋದೆವು. ನಮ್ಮ ಜೊತೆಗಿದ್ದ ಉಳಿದ ಏಳು ಮಂದಿ ಪ್ರವಾಸಿಗರು ಸಹ ಅದೇ ರೀತಿ ಮಾಡಿದರು. ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆಯುತ್ತಿದ್ದ ಕಾರಣ ನಾವೆಲ್ಲರೂ ಜೀವ ಉಳಿಸಿಕೊಳ್ಳಲು ಟೆಂಟ್ನ ನೆಲದ ಮೇಲೆ ಮಲಗಿಕೊಂಡೆವು. ಭಯೋತ್ಪಾದಕರ ಗುಂಪು ಮೊದಲು ಹತ್ತಿರದ ಟೆಂಟ್ಗೆ ಬಂದು ಗುಂಡಿನ ದಾಳಿ ನಡೆಸಿತು ಎಂದು ಸಂತ್ರಸ್ತೆಯೊಬ್ಬರು ಭಯಾನಕ ಮಾಹಿತಿ ನೀಡಿದ್ದಾರೆ. ಆ ಕ್ಷಣದ ಆತಂಕವನ್ನು ನೆನೆಸಿಕೊಂಡರೆ ಈಗಲೂ ಮೈ ಜುಮ್ಮೆನ್ನುತ್ತದೆ ಎಂದು ಅವರು ತಿಳಿಸಿದರು.