
ಪಹಲ್ಗಾಮ್ನಲ್ಲಿ ನಡೆದ ಭೀಕರ ಉಗ್ರರ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ. ಈ ದಾಳಿಯ ನಂತರ ಉಂಟಾದ ಪರಿಸ್ಥಿತಿಯನ್ನು ತಿಳಿಗೊಳಿಸಲು ಅಮೆರಿಕಾ ಮಧ್ಯಸ್ಥಿಕೆ ವಹಿಸಿ ಸಂಧಾನ ನಡೆಸಿದೆ ಎಂದು ಹೇಳಿಕೊಂಡಿದೆ. ಆದರೆ, ಈ ಸಂಧಾನದ ನಡುವೆಯೇ ಅಮೆರಿಕಾದ ಪಾತ್ರದ ಬಗ್ಗೆಯೇ ಅನುಮಾನಗಳು ಮೂಡಲಾರಂಭಿಸಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಉಗ್ರರ ಬಳಿ ಪಹಲ್ಗಾಮ್ನ ಸೂಕ್ಷ್ಮವಾದ ಉಪಗ್ರಹ ಚಿತ್ರಗಳು ಪತ್ತೆಯಾಗಿರುವುದು.
ಅಮೆರಿಕಾದ ಖಾಸಗಿ ಬಾಹ್ಯಾಕಾಶ ತಂತ್ರಜ್ಞಾನ ಕಂಪನಿಯಾದ ಮ್ಯಾಕ್ಸಾರ್ ಟೆಕ್ನಾಲಜೀಸ್ (Maxar Technologies) ಪಹಲ್ಗಾಮ್ನ ಈ ನಿರ್ದಿಷ್ಟ ಉಪಗ್ರಹ ಚಿತ್ರಗಳನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಅಚ್ಚರಿಯ ವಿಷಯವೆಂದರೆ, ಈ ಚಿತ್ರಗಳನ್ನು ಪಾಕಿಸ್ತಾನದಲ್ಲಿ ನಿಷೇಧಿತವಾಗಿರುವ ಒಂದು ನಿರ್ದಿಷ್ಟ ಕಂಪನಿಗೆ ಮಾರಾಟ ಮಾಡಲಾಗಿದೆ ಎಂಬುದು. ಹಾಗಾದರೆ, ಅಮೆರಿಕಾದ ಕಂಪನಿಯೊಂದು ನಿಷೇಧಿತ ಕಂಪನಿಗೆ ಈ ಸೂಕ್ಷ್ಮ ಮಾಹಿತಿಯನ್ನು ಏಕೆ ಮಾರಾಟ ಮಾಡಿತು? ಪಹಲ್ಗಾಮ್ನಂತಹ ಸೂಕ್ಷ್ಮ ಪ್ರದೇಶದ ಚಿತ್ರಗಳು ಉಗ್ರರ ಕೈಗೆ ಹೇಗೆ ಸಿಕ್ಕಿದವು? ಎಂಬ ಪ್ರಶ್ನೆಗಳು ಇದೀಗ ಭಾರತದ ಭದ್ರತಾ ವಲಯದಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿವೆ.
ದಾಳಿಯ ಸ್ವರೂಪವನ್ನು ಗಮನಿಸಿದರೆ, ಉಗ್ರರು ಪಹಲ್ಗಾಮ್ನ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಹೊಂದಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ, ಭದ್ರತಾ ಪಡೆಗಳ ಕಣ್ತಪ್ಪಿನ ಸ್ಥಳಗಳ (ಬ್ಲೈಂಡ್ ಸ್ಪಾಟ್ಸ್) ಬಗ್ಗೆಯೂ ಅವರಿಗೆ ಮೊದಲೇ ತಿಳಿದಿತ್ತು. ಈ ಎಲ್ಲಾ ಅಂಶಗಳು ಉಗ್ರರಿಗೆ ಲಭ್ಯವಿದ್ದ ನಿಖರವಾದ ಗುಪ್ತಚರ ಮಾಹಿತಿಯನ್ನು ಸೂಚಿಸುತ್ತವೆ.
ಇದಕ್ಕೆ ಪುಷ್ಟಿ ನೀಡುವಂತೆ, ದಾಳಿಗೂ ಕೇವಲ ಎರಡು ವಾರಗಳ ಮೊದಲು ಪಹಲ್ಗಾಮ್ನ ಉಪಗ್ರಹ ಚಿತ್ರಗಳಿಗೆ ಅಸಾಮಾನ್ಯ ಬೇಡಿಕೆ ಬಂದಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಸುಮಾರು ಮೂವತ್ತು ಚಿತ್ರಗಳನ್ನು ಆರ್ಡರ್ ಮಾಡಲಾಗಿತ್ತು. ವಿಶೇಷವೆಂದರೆ, 2024ರ ಜೂನ್ವರೆಗೆ ಮ್ಯಾಕ್ಸಾರ್ನ ನಕ್ಷೆಯಲ್ಲಿ ಪಹಲ್ಗಾಮ್ನ ಸ್ಪಷ್ಟ ಚಿತ್ರಗಳೇ ಇರಲಿಲ್ಲ. ಆದರೆ, 2024 ರಿಂದ 2025ರ ಫೆಬ್ರವರಿವರೆಗೆ ಬರೋಬ್ಬರಿ 30 ಉಪಗ್ರಹ ಚಿತ್ರಗಳಿಗೆ ಬೇಡಿಕೆ ಬಂದಿರುವುದು ಅಚ್ಚರಿ ಮೂಡಿಸಿದೆ. ದಾಳಿಗೂ ಕೇವಲ ಹತ್ತು ದಿನಗಳ ಮೊದಲು ಪಾಕಿಸ್ತಾನದ ಕಂಪನಿಯೊಂದು ಈ ಚಿತ್ರಗಳನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಏಪ್ರಿಲ್ 22ಕ್ಕೂ ಹತ್ತು ದಿನಗಳ ಮುಂಚೆಯೇ ಉಗ್ರರು ಈ ಚಿತ್ರಗಳನ್ನು ಖರೀದಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಒಂದೊಂದು ಚಿತ್ರಕ್ಕೂ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂಬುದು ಮತ್ತೊಂದು ಆಶ್ಚರ್ಯದ ಸಂಗತಿ.
ಇದನ್ನೂ ಓದಿ: ಹುತಾತ್ಮ ಯೋಧ ಮುರಳಿ ನಾಯಕ್ ಕುಟುಂಬಕ್ಕೆ ₹75 ಲಕ್ಷ, 5 ಎಕರೆ ಜಮೀನು ನೀಡಿದ ಪವನ್ ಕಲ್ಯಾಣ್
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪಾಕಿಸ್ತಾನ ಮೂಲದ ಬಿಎಸ್ಐ (BSI) ಕಂಪನಿಯು ಅಮೆರಿಕಾದಲ್ಲೇ ನಿಷೇಧಕ್ಕೊಳಗಾಗಿತ್ತು. ಚಿಕಾಗೋದಲ್ಲಿ ಈ ಕಂಪನಿಯನ್ನು ನಡೆಸುತ್ತಿದ್ದ ಒಬೈದುಲ್ಲ ಸೈ ಎಂಬಾತ ಅಕ್ರಮವಾಗಿ ಕಂಪ್ಯೂಟರ್ಗಳನ್ನು ರಫ್ತು ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿ ಜೈಲು ಸೇರಿದ್ದ. ವಿಪರ್ಯಾಸವೆಂದರೆ, ಇದೇ ಒಬೈದುಲ್ಲ ಅಮೆರಿಕಾದ ಮ್ಯಾಕ್ಸಾರ್ ಕಂಪನಿಯ ಪಾಲುದಾರನಾಗಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಬೆಳವಣಿಗೆಯು ಪಹಲ್ಗಾಮ್ ದಾಳಿಯ ಹಿಂದೆ ನೇರವಾಗಿ ಪಾಕಿಸ್ತಾನದ ಕೈವಾಡವಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಮ್ಯಾಕ್ಸಾರ್ನಿಂದ ಕೇವಲ ಒಂದು ಉಪಗ್ರಹ ಚಿತ್ರವನ್ನು ಪಡೆಯಲು ಸುಮಾರು 3 ರಿಂದ 4 ಲಕ್ಷ ರೂಪಾಯಿಗಳಷ್ಟು ಖರ್ಚಾಗುತ್ತದೆ. ಒಂದು ವೇಳೆ ಹೈ-ಡೆಫಿನಿಷನ್ (HD) ಚಿತ್ರಗಳಾಗಿದ್ದರೆ, ಅದರ ಬೆಲೆ ಇನ್ನಷ್ಟು ಹೆಚ್ಚಿರುತ್ತದೆ. ಹೀಗಿರುವಾಗ, ದಾಳಿಗೂ ಮುನ್ನ 20-30 ಉಪಗ್ರಹ ಚಿತ್ರಗಳನ್ನು ಆರ್ಡರ್ ಮಾಡಿರುವುದು ಏಕೆ? ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ಪಹಲ್ಗಾಮ್ನಲ್ಲಿ ಉಗ್ರರು ಏನು ನೋಡಲು ಬಯಸಿದ್ದರು? ಎಂಬ ಪ್ರಶ್ನೆಗಳು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಒಟ್ಟಾರೆಯಾಗಿ, ಪಹಲ್ಗಾಮ್ ದಾಳಿಯ ನಂತರ ಹೊರಬರುತ್ತಿರುವ ಈ ಆಘಾತಕಾರಿ ಮಾಹಿತಿಗಳು ಅಮೆರಿಕಾದ ಪಾತ್ರದ ಬಗ್ಗೆಯೇ ದೊಡ್ಡ ಅನುಮಾನಗಳನ್ನು ಹುಟ್ಟುಹಾಕಿವೆ. ಒಂದು ಕಡೆ ಶಾಂತಿ ಸಂಧಾನದ ನೆಪದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಯತ್ನಿಸುತ್ತಿರುವ ಅಮೆರಿಕಾ, ಇನ್ನೊಂದು ಕಡೆ ಪಾಕಿಸ್ತಾನದ ನಿಷೇಧಿತ ಕಂಪನಿಯೊಂದಿಗೆ ತನ್ನದೇ ಕಂಪನಿಯ ಪಾಲುದಾರನ ಮೂಲಕ ಉಗ್ರರಿಗೆ ನೆರವು ನೀಡಿದೆಯೇ ಎಂಬ ಗಂಭೀರ ಪ್ರಶ್ನೆ ಇದೀಗ ಭಾರತದ ಭದ್ರತಾ ವಲಯವನ್ನು ತಲ್ಲಣಗೊಳಿಸಿದೆ. ಈ ಪ್ರಕರಣದ ಸಂಪೂರ್ಣ ತನಿಖೆಯ ನಂತರವಷ್ಟೇ ಸತ್ಯಾಂಶ ಹೊರಬರಬೇಕಿದೆ.
ಇದನ್ನೂ ಓದಿ: ವೈರಿಗಳ ನಿದ್ದೆಗೆಡಿಸುವ ಬ್ರಹ್ಮೋಸ್ ಕ್ಷಿಪಣಿ! ಈ ಬ್ರಹ್ಮಾಸ್ತ್ರದ ಸಾಮಾರ್ಥ್ಯವೇನು?
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.