
- ಆಪರೇಷನ್ ಸಿಂಧೂರದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಯಶಸ್ಸು ಜಾಗತಿಕ ಗಮನ ಸೆಳೆದಿದೆ.
- 17ಕ್ಕೂ ಹೆಚ್ಚು ದೇಶಗಳು ಬ್ರಹ್ಮೋಸ್ ಖರೀದಿಸಲು ಆಸಕ್ತಿ ತೋರಿವೆ.
- ಸೂಪರ್ಸೋನಿಕ್ ವೇಗ ಮತ್ತು ಕರಾರುವಾಕ್ ದಾಳಿ ಸಾಮರ್ಥ್ಯ ಇದರ ಪ್ರಮುಖ ಆಕರ್ಷಣೆ.
ಪಾಕಿಸ್ತಾನದ ವಿರುದ್ಧ ಇತ್ತೀಚೆಗೆ ನಡೆದ ‘ಆಪರೇಷನ್ ಸಿಂಧೂರ’ದಲ್ಲಿ ಭಾರತಕ್ಕೆ ನಿರ್ಣಾಯಕ ಮೇಲುಗೈ ತಂದುಕೊಟ್ಟ ಶಕ್ತಿಶಾಲಿ ಅಸ್ತ್ರಗಳಲ್ಲಿ ಬ್ರಹ್ಮೋಸ್ ಕ್ರ್ಯೂಸ್ ಕ್ಷಿಪಣಿ ಮುಂಚೂಣಿಯಲ್ಲಿದೆ. ಈ ಕ್ಷಿಪಣಿಯು ಪಾಕಿಸ್ತಾನದ ಕೆಲವು ನಿರ್ದಿಷ್ಟ ಗುರಿಗಳ ಮೇಲೆ ಅತ್ಯಂತ ನಿಖರವಾದ ದಾಳಿಗಳನ್ನು ನಡೆಸಲು ನೆರವಾಯಿತು ಎನ್ನಲಾಗಿದೆ. ಅತ್ಯಾಧುನಿಕ ರಾಡಾರ್ ಮತ್ತು ರಕ್ಷಣಾ ವ್ಯವಸ್ಥೆಗಳ ಕಣ್ತಪ್ಪಿಸಿ ಮಿಂಚಿನ ವೇಗದಲ್ಲಿ ಧಾವಿಸಿ, ಗುರಿಯನ್ನು ಮುಟ್ಟುವ ಸಾಮರ್ಥ್ಯ ಈ ಕ್ಷಿಪಣಿಗಿದೆ. ಆಪರೇಷನ್ ಸಿಂಧೂರದಲ್ಲಿ ಇದರ ಸಾಮರ್ಥ್ಯ ಸಾಬೀತಾದ ನಂತರ, ಬ್ರಹ್ಮೋಸ್ ಖರೀದಿಸಲು ಆಸಕ್ತಿ ತೋರುವ ರಾಷ್ಟ್ರಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ವರದಿಯೊಂದರ ಪ್ರಕಾರ, ಸದ್ಯಕ್ಕೆ ಬರೋಬ್ಬರಿ 17 ದೇಶಗಳು ಈ ಮಾರಕ ಅಸ್ತ್ರವನ್ನು ಖರೀದಿಸಲು ಮುಂದೆ ಬಂದಿವೆ.
ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ ಮತ್ತು ರಷ್ಯಾ ದೇಶಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದರ ಸೂಪರ್ಸೋನಿಕ್ ವೇಗ, ಅತ್ಯಂತ ಕರಾರುವಾಕ್ ದಾಳಿ ಮಾಡುವ ಸಾಮರ್ಥ್ಯ ಮತ್ತು ವಿವಿಧ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಗುಣಲಕ್ಷಣಗಳು ವಿಶ್ವದಾದ್ಯಂತ ಇದರ ಬೇಡಿಕೆ ಹೆಚ್ಚಾಗಲು ಮುಖ್ಯ ಕಾರಣವಾಗಿವೆ. ಈ ಕ್ಷಿಪಣಿಯನ್ನು ನೆಲ, ವಾಯು ಮತ್ತು ಸಮುದ್ರದ ಮೇಲ್ಮೈಯಿಂದಲೂ ಉಡಾಯಿಸಬಹುದಾಗಿದೆ.
ಬ್ರಹ್ಮೋಸ್ ಖರೀದಿಸಲು ಆಸಕ್ತಿ ತೋರಿರುವ ದೇಶಗಳ ಪಟ್ಟಿ:
ಸದ್ಯಕ್ಕೆ ಭಾರತದೊಂದಿಗೆ ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಅಧಿಕೃತ ಒಪ್ಪಂದ ಮಾಡಿಕೊಂಡಿರುವುದು ಕೇವಲ ಫಿಲಿಪ್ಪೈನ್ಸ್ ಮಾತ್ರ. 2022ರಲ್ಲಿ ಫಿಲಿಪ್ಪೈನ್ಸ್ನ ಕರಾವಳಿ ಪಡೆಗೆ ಮೂರು ಡಿಫೆನ್ಸ್ ಬ್ಯಾಟರಿಗಳನ್ನು ಪೂರೈಸಲು ಭಾರತವು ಗುತ್ತಿಗೆ ಪಡೆದುಕೊಂಡಿತ್ತು. ಪ್ರತಿ ಬ್ಯಾಟರಿಯಲ್ಲಿಯೂ ಹತ್ತಾರು ಕ್ಷಿಪಣಿಗಳು ಇರುತ್ತವೆ. ಈಗಾಗಲೇ ಭಾರತವು ಒಂದು ಡಿಫೆನ್ಸ್ ಬ್ಯಾಟರಿಯನ್ನು ಫಿಲಿಪ್ಪೈನ್ಸ್ಗೆ ಹಸ್ತಾಂತರಿಸಿದೆ.
ಇದನ್ನೂ ಓದಿ: ಪಾಕಿಸ್ತಾನ, ಪ್ಯಾಲೆಸ್ಟೈನ್ ಬೆಂಬಲಿಸಿದ ದೇಶದ್ರೋಹಿಗಳಿಗೆ ಪುಣೆಯಲ್ಲಿ ಹಿಗ್ಗಾಮುಗ್ಗ ಥಳಿತ!
ಇದೀಗ ಮತ್ತಷ್ಟು ರಾಷ್ಟ್ರಗಳು ಬ್ರಹ್ಮೋಸ್ ಕ್ಷಿಪಣಿಯ ಸಾಮರ್ಥ್ಯಕ್ಕೆ ಮಾರುಹೋಗಿ ಖರೀದಿಸಲು ಆಸಕ್ತಿ ತೋರಿವೆ. ಅವುಗಳ ಪಟ್ಟಿ ಹೀಗಿದೆ:
- ಆಗ್ನೇಯ ಏಷ್ಯಾದ ರಾಷ್ಟ್ರಗಳು: ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ, ಥಾಯ್ಲೆಂಡ್, ಸಿಂಗಾಪುರ್, ಬ್ರೂನೇ.
- ಅಮೆರಿಕ ಖಂಡದ ರಾಷ್ಟ್ರಗಳು: ಬ್ರೆಜಿಲ್, ಚಿಲಿ, ಅರ್ಜೆಂಟೀನಾ, ವೆನಿಜುವೆಲಾ.
- ಮಧ್ಯಪ್ರಾಚ್ಯ ರಾಷ್ಟ್ರಗಳು: ಸೌದಿ ಅರೇಬಿಯಾ, ಕತಾರ್, ಓಮನ್, ಯುಎಇ, ಈಜಿಪ್ಟ್.
- ಇತರೆ ರಾಷ್ಟ್ರಗಳು: ದಕ್ಷಿಣ ಆಫ್ರಿಕಾ, ಬಲ್ಗೇರಿಯಾ.
ಕುತೂಹಲಕಾರಿ ಸಂಗತಿಯೆಂದರೆ, ಈ ಪಟ್ಟಿಯಲ್ಲಿರುವ ಬಹುತೇಕ ದೇಶಗಳು ಅಮೆರಿಕ ಮತ್ತು ಚೀನಾದ ಪ್ರಭಾವ ವಲಯದ ಸಮೀಪದಲ್ಲಿವೆ. ವಿಯೆಟ್ನಾಂ ತನ್ನ ಭೂಸೇನೆ ಮತ್ತು ನೌಕಾಸೇನೆಗಾಗಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಪಡೆಯಲು ಸುಮಾರು 700 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಮಲೇಷ್ಯಾ ಈಗಾಗಲೇ ರಷ್ಯಾ ನಿರ್ಮಿತ ಸುಖೋಯ್ ಎಸ್ಯು-30 ಎಂಕೆಎಂ ಫೈಟರ್ ಜೆಟ್ಗಳನ್ನು ಹೊಂದಿದ್ದು, ಅವುಗಳೊಂದಿಗೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಸಂಯೋಜಿಸಲು ಆಸಕ್ತಿ ತೋರಿಸಿದೆ. ಇನ್ನು ಇಂಡೋನೇಷ್ಯಾ ದೇಶವು ಬ್ರಹ್ಮೋಸ್ ಕ್ಷಿಪಣಿಯ ಹೊಸ ಆವೃತ್ತಿಯನ್ನು ಖರೀದಿಸಲು 300 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ಅಂತಿಮಗೊಳಿಸುತ್ತಿದೆ.
ಬ್ರಹ್ಮೋಸ್ ಕ್ಷಿಪಣಿಯ ಈ ಜಾಗತಿಕ ಬೇಡಿಕೆಯು ಭಾರತದ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ‘ಆಪರೇಷನ್ ಸಿಂಧೂರ’ದಲ್ಲಿ ಇದರ ಯಶಸ್ಸು ವಿಶ್ವದಾದ್ಯಂತ ಇದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ದೇಶಗಳು ಬ್ರಹ್ಮೋಸ್ ಖರೀದಿಗೆ ಮುಂದಾಗುವ ಸಾಧ್ಯತೆ ಇದೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.