
ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಈ ವರ್ಷಾಂತ್ಯಕ್ಕೆ ತಮ್ಮ ಸುಂಕಗಳನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಕೇವಲ ಪ್ರಿಪೇಯ್ಡ್ ಮಾತ್ರವಲ್ಲ, ಪೋಸ್ಟ್ಪೇಯ್ಡ್ ಮೊಬೈಲ್ ರೀಚಾರ್ಜ್ಗಳ ಬೆಲೆಯೂ ಏರಿಕೆಯಾಗಬಹುದು. ಇದರ ಪರಿಣಾಮವಾಗಿ, ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಸಕ್ರಿಯವಾಗಿ ಇರಿಸಿಕೊಳ್ಳಲು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
ಕರೆಗಳು, ಇಂಟರ್ನೆಟ್ ಮತ್ತು SMS ಸೇವೆಗಳಿಗೂ ಹೆಚ್ಚು ಹಣ ನೀಡಬೇಕಾದ ಪರಿಸ್ಥಿತಿ ಬರಬಹುದು. ಈ ಬೆಲೆ ಏರಿಕೆಯು ಸಾಮಾನ್ಯ ಮತ್ತು ಬಡ ಜನರಿಗೆ ಹೊರೆಯಾಗುವ ಸಾಧ್ಯತೆ ಇದೆ. ಪ್ರಸ್ತುತ, ಅನೇಕ ಬಳಕೆದಾರರು 28 ದಿನಗಳ ವ್ಯಾಲಿಡಿಟಿಯ ಅಗ್ಗದ ರೀಚಾರ್ಜ್ಗಾಗಿ ಸರಾಸರಿ 200 ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಮುಂಬರುವ ಸುಂಕ ಹೆಚ್ಚಳವು ಅವರ ಮಾಸಿಕ ಖರ್ಚನ್ನು ಇನ್ನಷ್ಟು ಹೆಚ್ಚಿಸಬಹುದು.
ET ಟೆಲಿಕಾಂ ವರದಿಯು ಬರ್ನ್ಸ್ಟೈನ್ ಎಂಬ ಬ್ರೋಕರೇಜ್ ಸಂಸ್ಥೆಯನ್ನು ಉಲ್ಲೇಖಿಸಿ, ಈ ಸುಂಕ ಹೆಚ್ಚಳವು ಟೆಲಿಕಾಂ ಉದ್ಯಮದಲ್ಲಿ ದರಗಳನ್ನು ಸರಿಪಡಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಹೇಳಿದೆ. 2027 ರ ಆರ್ಥಿಕ ವರ್ಷದವರೆಗೆ ಈ ಸುಂಕ ಏರಿಕೆ ಮುಂದುವರಿಯಬಹುದು ಎಂದು ವರದಿ ತಿಳಿಸಿದೆ. ನವೆಂಬರ್-ಡಿಸೆಂಬರ್ 2025 ರಲ್ಲಿ ರೀಚಾರ್ಜ್ಗಳು ದುಬಾರಿಯಾಗುವ ಸಾಧ್ಯತೆ ಇದ್ದು, ಇದು ಮೊಬೈಲ್ ಕಂಪನಿಗಳಿಗೆ ನೇರವಾಗಿ ಲಾಭವನ್ನು ತಂದುಕೊಡುತ್ತದೆ ಮತ್ತು ಅವರ ಆದಾಯವನ್ನು ಹೆಚ್ಚಿಸುತ್ತದೆ.
ಹೌದು, ಕಳೆದ ವರ್ಷ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ ತಮ್ಮ ಮೊಬೈಲ್ ರೀಚಾರ್ಜ್ ದರಗಳನ್ನು ಹೆಚ್ಚಿಸಿದ್ದವು. 5G ನೆಟ್ವರ್ಕ್ ಪ್ರಾರಂಭವಾದ ನಂತರ ತಕ್ಷಣಕ್ಕೆ ಬೆಲೆ ಏರಿಕೆಯಾಗದಿದ್ದರೂ, ಅದು ಅನಿವಾರ್ಯ ಎಂದು ಈ ಹಿಂದೆಯೇ ಹೇಳಲಾಗಿತ್ತು. ಈಗಿರುವ ದರಗಳು ಕೆಲವು ವರ್ಷಗಳವರೆಗೆ ಮುಂದುವರಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ನವೆಂಬರ್-ಡಿಸೆಂಬರ್ 2025 ರಲ್ಲಿ ಮತ್ತೆ ರೀಚಾರ್ಜ್ ದರಗಳು ಏರಿಕೆಯಾಗಲಿರುವುದರಿಂದ, ಇದು ಆರು ವರ್ಷಗಳಲ್ಲಿ ನಾಲ್ಕನೇ ಬಾರಿಯ ಬೆಲೆ ಏರಿಕೆಯಾಗಲಿದೆ.
ಇದನ್ನೂ ಓದಿ: ಬಿಜೆಪಿ ಭದ್ರಕೋಟೆ ಡಿಕೆಶಿ ಟಾರ್ಗೆಟ್!
ಕಳೆದ ಬಾರಿ ಈ ಮೂರು ಟೆಲಿಕಾಂ ಕಂಪನಿಗಳು ಜುಲೈ 2024 ರಲ್ಲಿ ತಮ್ಮ ಸುಂಕವನ್ನು 10% ರಿಂದ 27% ವರೆಗೆ ಹೆಚ್ಚಿಸಿದ್ದವು. ಅದಕ್ಕೂ ಮುಂಚೆ ಡಿಸೆಂಬರ್ 2021 ರಲ್ಲಿ ಬೆಲೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ನವೆಂಬರ್-ಡಿಸೆಂಬರ್ನಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಇರುವುದು ಗ್ರಾಹಕರಿಗೆ ಹೊರೆಯಾಗಲಿದೆ.
5G ನೆಟ್ವರ್ಕ್ನ ವಿಸ್ತರಣೆ ಮತ್ತು ಅದಕ್ಕೆ ತಗಲುವ ವೆಚ್ಚವು ಸುಂಕ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಟೆಲಿಕಾಂ ಕಂಪನಿಗಳು ತಮ್ಮ 5G ಜಾಲವನ್ನು ದೇಶಾದ್ಯಂತ ವಿಸ್ತರಿಸಲು ದೊಡ್ಡ ಪ್ರಮಾಣದ ಹೂಡಿಕೆ ಮಾಡಬೇಕಾಗಿದೆ. ಇದರಲ್ಲಿ ಹೊಸ ನೆಟ್ವರ್ಕ್ ಉಪಕರಣಗಳನ್ನು ಸ್ಥಾಪಿಸುವುದು, ಸ್ಪೆಕ್ಟ್ರಮ್ ಹಕ್ಕುಗಳನ್ನು ಖರೀದಿಸುವುದು ಮತ್ತು ಮೂಲಸೌಕರ್ಯವನ್ನು ನವೀಕರಿಸುವುದು ಸೇರಿವೆ. ಈ ಹೆಚ್ಚಿನ ವೆಚ್ಚವನ್ನು ಸರಿದೂಗಿಸಲು ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್ ದರಗಳನ್ನು ಹೆಚ್ಚಿಸುವ ಅನಿವಾರ್ಯತೆಗೆ ಸಿಲುಕಬಹುದು.
ಮನಿ ಕಂಟ್ರೋಲ್ ವರದಿಯ ಪ್ರಕಾರ, ವೊಡಾಫೋನ್-ಐಡಿಯಾದ ಸಿಇಒ ಅಕ್ಷಯ್ ಮುಂದ್ರಾ ಅವರು ಭಾರತದಂತಹ ಮಾರುಕಟ್ಟೆಯಲ್ಲಿ ಉತ್ತಮ ಸೇವೆ ಮತ್ತು ನೆಟ್ವರ್ಕ್ ಒದಗಿಸಲು ಪ್ರತಿ ಒಂಬತ್ತು ತಿಂಗಳಿಗೊಮ್ಮೆ ಸುಂಕಗಳು ಹೆಚ್ಚಾಗುವುದು ಅಗತ್ಯವೆಂದು ಅಭಿಪ್ರಾಯಪಟ್ಟಿದ್ದಾರೆ. ಜಿಯೋ ಮತ್ತು ಏರ್ಟೆಲ್ನಂತಹ ಪ್ರಮುಖ ಕಂಪನಿಗಳು ಈ ದುಬಾರಿ ರೀಚಾರ್ಜ್ನಿಂದ ನೇರ ಲಾಭ ಪಡೆಯಲಿದ್ದು, ಅವರ ಆದಾಯವು ಸುಮಾರು ಶೇಕಡಾ 19 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ವರದಿಯು ಎಲ್ಲಾ ಟೆಲಿಕಾಂ ಕಂಪನಿಗಳಲ್ಲಿ ಏರ್ಟೆಲ್ ಪ್ರಸ್ತುತ ಅತ್ಯಂತ ಉತ್ತಮ ಸ್ಥಿತಿಯಲ್ಲಿದೆ ಎಂದು ವಿಶ್ಲೇಷಿಸಿದೆ.