
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಒಂದು ವಾರಗಳ ಕಾಲ ಮುಂದೂಡಿದೆ. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ, ಮುಂದಿನ ವೇಳಾಪಟ್ಟಿ ಮತ್ತು ಪಂದ್ಯಗಳು ನಡೆಯುವ ಸ್ಥಳಗಳ ಮಾಹಿತಿಯನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಹೇಳಿದೆ.
ಬಿಸಿಸಿಐ ಹೇಳಿಕೆಯಲ್ಲಿ ಏನಿದೆ?
“ಈ ಕಠಿಣ ಪರಿಸ್ಥಿತಿಯಲ್ಲಿ ಬಿಸಿಸಿಐ ದೇಶದ ಜೊತೆಗೆ ದೃಢವಾಗಿ ನಿಲ್ಲುತ್ತದೆ. ಭಾರತ ಸರ್ಕಾರ, ಭಾರತೀಯ ಸೇನೆ ಮತ್ತು ಈ ದೇಶದ ಜನರೊಂದಿಗೆ ನಾವು ಸಂಪೂರ್ಣವಾಗಿ ಇದ್ದೇವೆ. ಕ್ರಿಕೆಟ್ ಈ ದೇಶದ ಪ್ಯಾಷನ್ ಆಗಿದ್ದರೂ, ದೇಶಕ್ಕಿಂತ ದೊಡ್ಡದಾದ್ದೇನೂ ಇಲ್ಲ. ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯ ಮತ್ತು ನಿಸ್ವಾರ್ಥ ಸೇವೆಯನ್ನು ನಾವು ಗೌರವಿಸುತ್ತೇವೆ. ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ರಾಷ್ಟ್ರವನ್ನು ರಕ್ಷಿಸುತ್ತಿರುವ ನಮ್ಮ ಸೈನಿಕರಿಗೆ ನಾವು ಸೆಲ್ಯೂಟ್ ಮಾಡುತ್ತೇವೆ” ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಬೆಂಗಳೂರು, ಹೈದರಾಬಾದ್ಗೆ ಪಂದ್ಯಗಳು?
ವರದಿಗಳ ಪ್ರಕಾರ, ಒಂದು ವಾರದ ನಂತರ ಪರಿಸ್ಥಿತಿ ಸುಧಾರಿಸಿದರೂ ಅಪಾಯವನ್ನು ತೆಗೆದುಕೊಳ್ಳಲು ಬಿಸಿಸಿಐ ಸಿದ್ಧವಿಲ್ಲ. ಹೀಗಾಗಿ, ಗಡಿ ಭಾಗದ ಸ್ಥಳಗಳ ಬದಲು ದಕ್ಷಿಣ ಭಾರತದಲ್ಲಿ ಉಳಿದ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಬಹುತೇಕ ಪಂದ್ಯಗಳು ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಒಂದು ವೇಳೆ ಈ ಎರಡು ನಗರಗಳಲ್ಲಿಯೂ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗದಿದ್ದರೆ, ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್ ನಂತರಕ್ಕೆ ಮುಂದೂಡುವ ಸಾಧ್ಯತೆಯೂ ಇದೆ. ಏಕೆಂದರೆ ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಡೆಯಲಿದೆ. ಇದರ ನಂತರ ಭಾರತ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಆಗಸ್ಟ್ನಲ್ಲಿ ಐಪಿಎಲ್ ಆಯೋಜಿಸುವುದಾದರೆ, ಟೀಮ್ ಇಂಡಿಯಾದ ಬಾಂಗ್ಲಾದೇಶ ಪ್ರವಾಸದ ವೇಳಾಪಟ್ಟಿಯನ್ನು ಬದಲಾಯಿಸಬೇಕಾಗುತ್ತದೆ. ಇದರ ಜೊತೆಗೆ, ಆಗಸ್ಟ್ನಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ವೈಟ್ಬಾಲ್ ಸರಣಿಯೂ ನಿಗದಿಯಾಗಿದೆ.
ಇದನ್ನೂ ಓದಿ: ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಿ!ಮುಸ್ಲಿಮರಿಗೆ ಅಲ್ಖೈದಾ ಪ್ರಚೋದನೆ!
ಸೆಪ್ಟೆಂಬರ್ನಲ್ಲಿ ಐಪಿಎಲ್? ಏಷ್ಯಾ ಕಪ್ ರದ್ದು?
ಲಭ್ಯವಿರುವ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ನಲ್ಲಿ ಸುಮಾರು ಎರಡು ವಾರಗಳ ವಿಂಡೋ ಲಭ್ಯವಿದೆ. ಇದೇ ಸಮಯದಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟೂರ್ನಿಯನ್ನು ರದ್ದುಗೊಳಿಸಿ ಐಪಿಎಲ್ ನಡೆಸುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಆದರೆ ಈ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
ಅಭಿಮಾನಿಗಳಿಗೆ ನಿರಾಸೆ, ಆಟಗಾರರಲ್ಲಿ ಆತಂಕ
ಐಪಿಎಲ್ ಮುಂದೂಡಿಕೆಯ ನಿರ್ಧಾರವು ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ನಿರಾಸೆಯನ್ನುಂಟು ಮಾಡಿದೆ. ಟೂರ್ನಿಯ ಮರು ಆರಂಭದ ಬಗ್ಗೆ ಅನಿಶ್ಚಿತತೆ ಇರುವುದರಿಂದ ಆಟಗಾರರು ಕೂಡ ಆತಂಕದಲ್ಲಿದ್ದಾರೆ. ಆದಾಗ್ಯೂ, ಬಿಸಿಸಿಐ ದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಮುಂದೇನು?
ಬಿಸಿಸಿಐ ಶೀಘ್ರದಲ್ಲೇ ಪರಿಸ್ಥಿತಿಯನ್ನು ಅವಲೋಕಿಸಿ ಹೊಸ ವೇಳಾಪಟ್ಟಿ ಮತ್ತು ಪಂದ್ಯಗಳ ಸ್ಥಳಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಅಭಿಮಾನಿಗಳು ಮತ್ತು ಆಟಗಾರರು ಕಾಯಬೇಕಾಗಿದೆ. ದೇಶ ಮೊದಲು ಎಂಬ ಬಿಸಿಸಿಐನ ನಿರ್ಧಾರಕ್ಕೆ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.