
ಮಂಗಳೂರು, ಮೇ 6: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಅವರ ಹತ್ಯೆಯ ಹಿಂದೆ ವಿದೇಶದಿಂದ ಹಣ ಹರಿದು ಬಂದಿರುವ ಬಲವಾದ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಮಂಗಳೂರು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಮೇ 1ರಂದು ನಡೆದ ಈ ಭೀಕರ ಕೊಲೆ ಪ್ರಕರಣವು ಹಲವು ಕಾಣದ ಕೈಗಳ ಕೈವಾಡವನ್ನು ಹೊಂದಿರುವ ಸಾಧ್ಯತೆಗಳಿರುವುದರಿಂದ, ತನಿಖಾ ತಂಡವು ಅನೇಕ ಬ್ಯಾಂಕ್ ಖಾತೆಗಳ ವಿವರಗಳನ್ನು ಪರಿಶೀಲಿಸುತ್ತಿದೆ.
ಪೊಲೀಸ್ ಮೂಲಗಳ ಪ್ರಕಾರ, ಸುಹಾಸ್ ಶೆಟ್ಟಿ ಅವರನ್ನು ಕೇವಲ 5 ಲಕ್ಷ ರೂಪಾಯಿಗಳಿಗೆ ಹತ್ಯೆ ಮಾಡಲಾಗಿದೆಯೇ ಅಥವಾ ಈ ಕೃತ್ಯಕ್ಕೆ ವಿದೇಶದಿಂದ ಹಣಕಾಸಿನ ನೆರವು ಬಂದಿದೆಯೇ ಎಂಬುದು ಸೇರಿದಂತೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಮುಂದುವರೆದಿದೆ. ಹತ್ಯೆಯ ಪ್ರಮುಖ ಆರೋಪಿ ಸಫ್ವಾನ್, ಸುಹಾಸ್ ಶೆಟ್ಟಿಯನ್ನು ಮುಗಿಸಲೇಬೇಕೆಂದು ನಿರ್ಧರಿಸಿದ್ದ ಮತ್ತು ಇದಕ್ಕಾಗಿ ಅನೇಕ ವ್ಯಕ್ತಿಗಳನ್ನು ಸಂಪರ್ಕಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ, ಮುಜಾಮಿಲ್ ಎಂಬಾತನ ಮೂಲಕ ವಿದೇಶದಲ್ಲಿರುವ ಕೆಲವರಿಂದ ಹಣಕಾಸಿನ ಸಹಾಯ ಪಡೆದಿರುವ ಅನುಮಾನಗಳು ವ್ಯಕ್ತವಾಗುತ್ತಿವೆ.
ಹತ್ಯೆಯ ನಂತರ ಸಂಭವನೀಯ ಬಂಧನ ಮತ್ತು ಜಾಮೀನು ಪ್ರಕ್ರಿಯೆಗಳಿಗೆ ಸಹಾಯ ಪಡೆಯಲು ಸಫ್ವಾನ್ ಅನೇಕರ ಮುಂದೆ ಸಹಾಯ ಹಸ್ತ ಚಾಚಿದ್ದ. ಅಲ್ಲದೆ, ಹತ್ಯೆಯಾದ ಕೂಡಲೇ ಪೊಲೀಸರಿಗೆ ಶರಣಾಗುವ ಬಗ್ಗೆಯೂ ಹಂತಕರ ತಂಡವು ಚರ್ಚೆ ನಡೆಸಿತ್ತು ಎಂದು ಹೇಳಲಾಗಿದೆ.
‘ಬಿ ಪ್ಲ್ಯಾನ್’ ಕೂಡ ಸಿದ್ಧವಾಗಿತ್ತು!
ತನಿಖೆಯ ವೇಳೆ ಬಹಿರಂಗಗೊಂಡಿರುವ ಮತ್ತೊಂದು ಆಘಾತಕಾರಿ ವಿಷಯವೆಂದರೆ, ಜನವರಿ ತಿಂಗಳಲ್ಲೇ ಫಾಜಿಲ್ನ ಸಹೋದರ ಆದಿಲ್ ಎಂಬಾತ ಸಫ್ವಾನ್ ತಂಡಕ್ಕೆ 3 ಲಕ್ಷ ರೂಪಾಯಿಗಳನ್ನು ನೀಡಿದ್ದ. ಕೃತ್ಯಕ್ಕೆ ಬಳಸಲು ಪಿಕ್ ಅಪ್ ವಾಹನ ಮತ್ತು ಸ್ವಿಫ್ಟ್ ಕಾರನ್ನು ಸಹ ಆತ ಸೂಚಿಸಿದ್ದ. ಒಂದು ವೇಳೆ ಸುಹಾಸ್ ತಪ್ಪಿಸಿಕೊಂಡರೆಂಬ ಕಾರಣಕ್ಕೆ ‘ಪ್ಲ್ಯಾನ್ ಬಿ’ಯನ್ನು ಸಹ ಹಂತಕರ ತಂಡವು ಸಿದ್ಧಪಡಿಸಿತ್ತು. ಹಂತಕರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಾಣದ ಕೈಗಳ ಗುಂಪೊಂದು ಮಾಡಿತ್ತು ಎಂದು ಹೇಳಲಾಗುತ್ತಿದೆ.
ಮೂರು ತಿಂಗಳ ಹಿಂದೆಯೇ ‘ಡೆಡ್ಲಿ ಟೀಮ್’ ಅನ್ನು ಸಿದ್ಧಪಡಿಸಿದ್ದ ಸಫ್ವಾನ್, ಸುಹಾಸ್ ಶೆಟ್ಟಿಯ ಚಲನವಲನಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದ. ಈ ಸಂದರ್ಭದಲ್ಲಿ, ಸುಹಾಸ್ ಬಜಪೆಗೆ ಬರುವ ಬಗ್ಗೆ ಸ್ಥಳೀಯ ಆರೋಪಿ ಅಜರುದ್ದೀನ್ ಎಂಬಾತ ಸಫ್ವಾನ್ಗೆ ಮಾಹಿತಿ ನೀಡಿದ್ದ. ಸುಹಾಸ್ ಎಷ್ಟು ಗಂಟೆಗೆ ಹೊರಡುತ್ತಾನೆ ಮತ್ತು ಅವನೊಂದಿಗೆ ಯಾರಿದ್ದಾರೆ ಎಂಬ ನಿಖರ ಮಾಹಿತಿಯನ್ನು ಅಜರುದ್ದೀನ್ ನೀಡಿದ್ದ. ಸುಹಾಸ್ ಹತ್ಯೆಯಾದ ಕೂಡಲೇ ಅಜರುದ್ದೀನ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ: ನಾಳೆ ದೇಶಾದ್ಯಂತ ರಕ್ಷಣಾ ಮಾಕ್ ಡ್ರಿಲ್! ದೇಶದಲ್ಲಿ ನಾಳೆ ಏನೆಲ್ಲ ನಡೆಯಲಿದೆ..?
ಚಿಕ್ಕಮಗಳೂರಿನಲ್ಲಿ ಹತ್ಯೆಗೆ ಸ್ಕೆಚ್?
ಸುಹಾಸ್ ಶೆಟ್ಟಿಯ ಹತ್ಯೆಗೆ ಏಪ್ರಿಲ್ 2ರಂದು ಚಿಕ್ಕಮಗಳೂರಿನ ಕಳಸದ ರೆಸಾರ್ಟ್ವೊಂದರಲ್ಲಿ ಆರೋಪಿಗಳು ಸಂಚು ರೂಪಿಸಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆ ಆರೋಪದಲ್ಲಿ ಬಂಧಿತರಾಗಿರುವ ರಂಜಿತ್, ಮುಜಮ್ಮಿಲ್ ಮತ್ತು ನಿಯಾಜ್ ರಾತ್ರಿ ವೇಳೆ ಕ್ಯಾಂಪ್ ಫೈರ್ ಹಾಕಿ ಪಾರ್ಟಿ ಮಾಡಿರುವ ಫೋಟೋಗಳು ಮಾಧ್ಯಮಗಳಿಗೆ ಲಭ್ಯವಾಗಿವೆ. ಈ ಮೂವರ ಜೊತೆಗೆ ಇನ್ನೂ ಐದು ಮಂದಿ ಅಪರಿಚಿತರು ಇದ್ದರು ಎಂದು ಹೇಳಲಾಗುತ್ತಿದೆ. ಫಾಜಿಲ್ನ ಸಹೋದರ ಆದಿಲ್ ನೀಡಿದ 3 ಲಕ್ಷ ರೂಪಾಯಿ ಅಡ್ವಾನ್ಸ್ ಹಣದಲ್ಲಿ ಈ ಮೂವರು ಆರೋಪಿಗಳು ಕಳಸದಲ್ಲಿ ಪಾರ್ಟಿ ಮಾಡಿರುವ ಶಂಕೆ ಪೊಲೀಸರಿಗಿದೆ. ಇದೇ ಪಾರ್ಟಿಯಲ್ಲಿ ರಂಜಿತ್ನನ್ನು ಮುಜಮ್ಮಿಲ್ಗೆ ನಿಯಾಜ್ ಪರಿಚಯ ಮಾಡಿಸಿದ್ದ ಮತ್ತು ಈ ವೇಳೆ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಅನುಮಾನಗಳು ತನಿಖಾಧಿಕಾರಿಗಳಿಗಿವೆ.
ಸುಖಾನಂದ ಶೆಟ್ಟಿ ಹತ್ಯೆ ಆರೋಪಿಯೇ ಗೈಡ್?
19 ವರ್ಷಗಳ ಹಿಂದೆ, 2006ರ ಡಿಸೆಂಬರ್ 1ರಂದು ಮಂಗಳೂರಿನ ಕುಳಾಯಿ ಬಳಿ ನಡೆದ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಹತ್ಯೆಯ ಮಾದರಿಯಲ್ಲೇ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಗಿದೆ ಎಂಬುದು ಗಮನಾರ್ಹ. ಸುಖಾನಂದ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ನಟೋರಿಯಸ್ ನೌಷದ್ ಎಂಬಾತ, ಸುಹಾಸ್ ಶೆಟ್ಟಿ ಕೊಲೆ ಆರೋಪಿ ನಿಯಾಜ್ನ ಸಂಬಂಧಿ. ಸುಹಾಸ್ ಹತ್ಯೆಗೆ ಮುನ್ನ ಸಫ್ವಾನ್ ತಂಡವು ನೌಷದ್ನನ್ನು ಸಂಪರ್ಕಿಸಿತ್ತು. ಅದೇ ಮಾದರಿಯಲ್ಲಿ ಹತ್ಯೆಯ ಯೋಜನೆ ರೂಪಿಸಲು ಈ ತಂಡವು ನೌಷದ್ ಬಳಿಗೆ ಬಂದಿತ್ತು. ಈ ವೇಳೆ ನೌಷದ್, ಸಫ್ವಾನ್ ತಂಡಕ್ಕೆ ಮಾರ್ಗದರ್ಶನ ನೀಡಿದ್ದ. ಕಾರುಗಳ ಬಳಕೆ, ಎಂಟ್ರಿ ಮತ್ತು ಎಕ್ಸಿಟ್ ಮಾರ್ಗಗಳ ಬಗ್ಗೆ ತಿಳಿಸಿದ್ದಲ್ಲದೆ, ಲೊಕೇಶನ್ ಮ್ಯಾಪ್ನೊಂದಿಗೆ ಇಡೀ ಹತ್ಯೆಯ ಯೋಜನೆಯನ್ನು ವಿವರಿಸಿದ್ದ. ಅದರಂತೆಯೇ ಸುಹಾಸ್ ಶೆಟ್ಟಿ ಹತ್ಯೆಯ ಸ್ಕೆಚ್ ರೂಪುಗೊಂಡಿತ್ತು ಎಂದು ಹೇಳಲಾಗಿದೆ.
ಸುಖಾನಂದ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 23 ಆರೋಪಿಗಳನ್ನು ಬಂಧಿಸಲಾಗಿತ್ತು. ಇದರಲ್ಲಿ ಮೂಲ್ಕಿ ರಫೀಕ್ ಮತ್ತು ಅತಿಕ್ ಎಂಬ ಇಬ್ಬರು ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದರು. ಉಳಿದ ಆರೋಪಿಗಳನ್ನು 2018ರಲ್ಲಿ ಮಂಗಳೂರು ಕೋರ್ಟ್ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿತ್ತು. ಆ ಬಳಿಕ ಮತ್ತೆ ನೌಷದ್ ಕ್ರಿಮಿನಲ್ ಚಟುವಟಿಕೆಗಳಿಗೆ ಇಳಿದಿರುವ ಸಾಧ್ಯತೆಗಳಿದ್ದು, ಪೊಲೀಸರು ಈ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಹತ್ಯೆಯ ಪ್ರಮುಖ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಮೇ 9ರವರೆಗೆ 8 ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಮಧ್ಯೆ, ಪೊಲೀಸರು ಆರೋಪಿಗಳನ್ನು ಹತ್ಯೆ ನಡೆದ ಬಜಪೆಯ ಕಿನ್ನಿಪದವಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಪ್ರಕ್ರಿಯೆಯನ್ನು ನಡೆಸಿದ್ದಾರೆ. ತನಿಖೆಯು ಮತ್ತಷ್ಟು ಬಿರುಸುಗೊಂಡಿದ್ದು, ಹತ್ಯೆಯ ಹಿಂದಿರುವ ಕಾಣದ ಕೈಗಳು ಮತ್ತು ಹಣದ ಮೂಲದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.