
- ಭಾರತ ಮೂಲದ ಮಕ್ಕಳ ವೈದ್ಯೆ ಡಾ. ನೇಹಾ ಗುಪ್ತಾ
- ಸ್ವಂತ ಮಗಳನ್ನೇ ಸಾಯಿಸಿರುವ ಆರೋಪ
- ಮಗಳನ್ನು ಸಾಯಿಸಿದ ನಂತರ ಪೊಲೀಸ್ ಗೆ ಫೋನ್ ಮಾಡಿದ ಡಾಕ್ಟರ್
ಕೆಲವು ಸುದ್ದಿಗಳನ್ನು ಕೇಳಿದಾಗ ಮನಸ್ಸು ತೀವ್ರವಾಗಿ ಕಲಕುತ್ತದೆ. ಅದರಲ್ಲೂ ಒಬ್ಬ ತಾಯಿಯೇ ತನ್ನ ಮಗುವಿಗೆ ಇಂತಹ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಾಗ, ಅದು ನಂಬಲಸಾಧ್ಯವಾದ ವಿಚಾರವಾಗಿಬಿಡುತ್ತದೆ. ಅಮೆರಿಕಾದಲ್ಲಿ ಇಂತಹದ್ದೇ ಒಂದು ಘಟನೆ ಬೆಳಕಿಗೆ ಬಂದಿದ್ದು, ಭಾರತ ಮೂಲದ ಮಕ್ಕಳ ತಜ್ಞ ವೈದ್ಯೆ ಡಾಕ್ಟರ್ ನೇಹಾ ಗುಪ್ತಾ ವಿರುದ್ಧ ತನ್ನದೇ 4 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ.
ಒಕ್ಲಹೋಮಾದ 36 ವರ್ಷದ ಮಕ್ಕಳ ತಜ್ಞ ವೈದ್ಯೆ ಡಾಕ್ಟರ್ ನೇಹಾ ಗುಪ್ತಾ, ತನ್ನ 4 ವರ್ಷದ ಮಗಳು ಅರಿಯಾ ತಲಥಿಯನ್ನು ಫ್ಲೋರಿಡಾಗೆ ಕರೆದೊಯ್ದಿದ್ದಾರೆ. ಅಲ್ಲಿ ಒಂದು ಬಾಡಿಗೆ ರೂಂ ಪಡೆದು ವಾಸಿಸುವಾಗ, ಆಕೆಯ ಮಗಳು ಹೋಟೆಲ್ನ ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎಂದು ನೇಹಾ ಗುಪ್ತಾ ತಾನೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣವೇ ಮಗುವನ್ನು ಫ್ಲೋರಿಡಾದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ. ಮೇಲ್ನೋಟಕ್ಕೆ ಇದೊಂದು ದುರಂತ ಅಪಘಾತದಂತೆ ಕಾಣುತ್ತಿತ್ತು.
ಮಗುವಿನ ಸಾವಿನ ಹಿಂದಿನ ಸತ್ಯಾಂಶವನ್ನು ಹೊರತರಲು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರು. ಈ ವರದಿ, ನೇಹಾ ಗುಪ್ತಾ ಹೇಳಿದ್ದ ಕಥೆಯನ್ನು ಸಂಪೂರ್ಣವಾಗಿ ಸುಳ್ಳು ಎಂದು ಸಾರಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ಮಗುವಿನ ಶ್ವಾಸಕೋಶ ಮತ್ತು ಹೊಟ್ಟೆಯಲ್ಲಿ ಯಾವುದೇ ನೀರು ಪತ್ತೆಯಾಗಿಲ್ಲ! ಇದು ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂಬ ವಾದಕ್ಕೆ ಯಾವುದೇ ಪುಷ್ಟಿ ಅಥವಾ ಸಾಕ್ಷ್ಯವನ್ನು ನೀಡಲಿಲ್ಲ.
ಇದನ್ನೂ ಓದಿ: ಚಿನ್ನ ಖರೀದಿಗೆ ಇದೇ ಬೆಸ್ಟ್ ಟೈಂ! ಬಂಗಾರದ ಬೆಲೆಯಲ್ಲಿ ಭಾರಿ ಕುಸಿತ, ದರ ನೋಡಿ ಶಾಕ್ ಆಗ್ತೀರಾ!
ಬದಲಿಗೆ, ವರದಿಯು ಆಘಾತಕಾರಿ ಸತ್ಯಗಳನ್ನು ಹೊರಹಾಕಿದೆ. ಮಗುವಿನ ಬಾಯಿಯೊಳಗೆ ಗಾಯಗಳು ಪತ್ತೆಯಾಗಿವೆ. ಜೊತೆಗೆ ಕೆನ್ನೆಯಲ್ಲಿ ಮೂಗೇಟುಗಳು ಕಂಡುಬಂದಿವೆ. ಮಗುವಿನ ದೇಹದ ಮೇಲೆ ಕಂಡುಬಂದಿರುವ ಈ ಗಾಯಗಳು, ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಕ್ಕೆ ಪೂರಕವಾದ ಸಾಕ್ಷ್ಯಗಳು ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರ ಪ್ರಕಾರ, ಮಗುವನ್ನು ಸ್ವಿಮ್ಮಿಂಗ್ ಪೂಲ್ಗೆ ಹಾಕುವ ಮುನ್ನವೇ ಉಸಿರುಗಟ್ಟಿಸಿ ಕೊಲ್ಲಲಾಗಿದೆ. ನಂತರ ಕೊಲೆಯನ್ನು ಮರೆಮಾಚಲು ನೇಹಾ ಗುಪ್ತಾ, ಮಗು ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗಿದೆ ಎಂದು ಪ್ರದರ್ಶಿಸುವ ಮೂಲಕ ನಂಬಿಸಲು ಯತ್ನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇಂತಹ ಘೋರ ಕೃತ್ಯಕ್ಕೆ ಏನು ಕಾರಣವಿರಬಹುದು? ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಒಂದು ಭಯಾನಕ ಕಾರಣ ಹೊರಬಿದ್ದಿದೆ. ನೇಹಾ ಗುಪ್ತಾ ಮತ್ತು ಅವರ ಪತಿ ಡಾಕ್ಟರ್ ಸೌರಭ್ ತಲಥಿ ಈಗಾಗಲೇ ವಿವಾಹ ವಿಚ್ಛೇದನ (ಡಿವೋರ್ಸ್) ಪಡೆದಿದ್ದಾರೆ. ಅವರ ಮಗಳು ಅರಿಯಾಳ ಕಸ್ಟಡಿಗೆ ಸಂಬಂಧಿಸಿದಂತೆ ಇಬ್ಬರೂ ಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದರು. ಈ ಹೋರಾಟದಲ್ಲಿ, ಮಗಳ ಕಸ್ಟಡಿಯನ್ನು ಪತಿ ಡಾಕ್ಟರ್ ಸೌರಭ್ ತಲಥಿ ಅವರಿಗೆ ನೀಡಬೇಕೆಂದು ಕೋರ್ಟ್ ಆದೇಶ ನೀಡಿತ್ತು.
ಪೊಲೀಸರ ಶಂಕೆಯೆಂದರೆ, ಕೋರ್ಟ್ ಆದೇಶವನ್ನು ಒಪ್ಪಿಕೊಳ್ಳಲು ಮತ್ತು ಮಗಳನ್ನು ಪತಿಯ ವಶಕ್ಕೆ ನೀಡಲು ನೇಹಾ ಗುಪ್ತಾ ಅವರಿಗೆ ಸಾಧ್ಯವಾಗಿರಲಿಲ್ಲ. ಇದೇ ಕಾರಣಕ್ಕೆ, ಆ ತಾಯಿಯೇ ತನ್ನ ಮಗಳನ್ನು ಈ ರೀತಿ ಹತ್ಯೆಗೈದಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಫ್ಲೋರಿಡಾಗೆ ಭೇಟಿ ನೀಡುವ ವಿಷಯವೂ ಪತಿ ಸೌರಭ್ ತಲಥಿಗೆ ತಿಳಿದಿರಲಿಲ್ಲ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ನೇಹಾ ಗುಪ್ತಾ ಪರ ವಕೀಲ ರಿಚರ್ಡ್ ಕೂಪರ್ ಪ್ರತಿಕ್ರಿಯಿಸಿದ್ದಾರೆ. ಅವರ ಪ್ರಕಾರ, ನೇಹಾಗೆ ಪರಾರಿಯಾಗಲು ಸಾಕಷ್ಟು ಅವಕಾಶಗಳಿದ್ದವು, ಆದರೆ ಅವರು ಹಾಗೆ ಮಾಡಿಲ್ಲ. ಬದಲಾಗಿ, ನೇಹಾ ಪೊಲೀಸರ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ ಮತ್ತು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. “ಪೊಲೀಸರಿಂದ ನೇಹಾಗೆ ದ್ರೋಹವಾಗಿದೆ. ಪೊಲೀಸರು ಒತ್ತಡಕ್ಕೊಳಗಾಗಿ ನೇಹಾ ಗುಪ್ತಾರನ್ನು ಆರೋಪಿಯನ್ನಾಗಿ ಮಾಡಿದ್ದಾರೆ” ಎಂದು ವಕೀಲರು ಆರೋಪಿಸಿದ್ದಾರೆ. “ತನ್ನ ಮಗಳನ್ನು ತಾನೇ ಕೊಲ್ಲುತ್ತಾಳೆ ಎಂಬುದನ್ನು ಊಹಿಸಲಾಗಲ್ಲ” ಎಂದು ಅವರು ಹೇಳಿದ್ದಾರೆ.
Sri Rama is a seasoned journalist with four years of experience, specializing in capturing and analyzing the latest news and trending stories. He brings extensive expertise in news collection, reporting, and interviewing across a broad spectrum of topics, including politics.