
ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನದ ಮೇಲೆ ಯಾವುದೇ ಸೇನಾ ಕ್ರಮ ಕೈಗೊಂಡರೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧ ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಚಿವೆ ಅಜ್ಮಾ ಬೊಖಾರಿ ಎಚ್ಚರಿಕೆ ನೀಡಿದ್ದಾರೆ.
ತಮ್ಮ ವಿವಾದಾತ್ಮಕ ಹೇಳಿಕೆಯಲ್ಲಿ ಮಾತನಾಡಿದ ಸಚಿವೆ ಬೊಖಾರಿ, “ಸುಳ್ಳು ಆರೋಪಗಳ ಮೇಲೆ ಭಾರತ ಯಾವುದೇ ದುಸ್ಸಾಹಸಕ್ಕೆ ಮುಂದಾದರೆ ಅದರ ಪರಿಣಾಮಗಳು ಭೀಕರವಾಗಿರುತ್ತವೆ. ಕಳೆದ ಬಾರಿ ಅವರು ಅಭಿನಂದನ್ ವರ್ಧಮಾನ್ಗೆ ಚಹಾ ನೀಡಿದ್ದೆವು. ಆದರೆ ಈ ಬಾರಿ ನಾವು ಅಂತಹ ಯಾವುದೇ ದಯೆ ತೋರಿಸುವುದಿಲ್ಲ. ಅತಿಥಿಯು ಒಮ್ಮೆ ಬಂದರೆ ಸಹಿಸಿಕೊಳ್ಳಬಹುದು, ಆದರೆ ಅವರು ಪದೇ ಪದೇ ಬಂದರೆ, ಪಾಕಿಸ್ತಾನದ ಸೇನೆ, ಸರ್ಕಾರ ಮತ್ತು ಜನರು ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ” ಎಂದು ತಮ್ಮ ಉದ್ಧಟತನದ ಧೋರಣೆಯನ್ನು ವ್ಯಕ್ತಪಡಿಸಿದ್ದಾರೆ.
ಭಾರತದ ಕ್ರಮಕ್ಕೆ ಪ್ರತ್ಯುತ್ತರ ನೀಡಲು ಪಾಕ್ ತುರ್ತು ಸಭೆ
ಪಹಲ್ಗಾಮ್ ದಾಳಿಯ ನಂತರ ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸುವ ಭಾರತ ಸರ್ಕಾರದ ನಿರ್ಧಾರಕ್ಕೆ ಪ್ರತಿಕ್ರಿಯಿಸಲು ಪಾಕಿಸ್ತಾನವು ಇಂದು ತುರ್ತು ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯನ್ನು ಕರೆದಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಧಾನಿ ಶಹಬಾಜ್ ಷರೀಫ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಎಲ್ಲಾ ಪ್ರಮುಖ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಲಿದ್ದು, ಭಾರತದ ಕ್ರಮಕ್ಕೆ ಸೂಕ್ತ ಉತ್ತರ ನೀಡುವ ಕುರಿತು ಚರ್ಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಆಗಿ ನನಗೆ ನಾಚಿಕೆಯಾಗುತ್ತಿದೆ
ಕಾಶ್ಮೀರದಿಂದ ಪ್ರವಾಸಿಗರ ದಿಢೀರ್ ನಿರ್ಗಮನ
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಣಿವೆಯನ್ನು ತೊರೆಯುತ್ತಿದ್ದು, ಶ್ರೀನಗರ ವಿಮಾನ ನಿಲ್ದಾಣದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕೇವಲ ಆರು ಗಂಟೆಗಳಲ್ಲಿ ಸುಮಾರು 3,337 ಪ್ರವಾಸಿಗರು ಕಾಶ್ಮೀರದಿಂದ ವಾಪಸ್ ತೆರಳಿದ್ದಾರೆ.
ಈ ಪರಿಸ್ಥಿತಿಯನ್ನು ನಿಭಾಯಿಸಲು, ಶ್ರೀನಗರದಿಂದ ದೇಶದ ವಿವಿಧ ಭಾಗಗಳಿಗೆ ತೆರಳುವ ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಇಂಡಿಗೋ, ಏರ್ ಇಂಡಿಯಾ ಮತ್ತು ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆಗಳು ದೆಹಲಿ ಮತ್ತು ಮುಂಬೈ ನಡುವೆ ಹೆಚ್ಚುವರಿ ವಿಮಾನ ಸೇವೆಗಳನ್ನು ಪ್ರಾರಂಭಿಸಿವೆ.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ, ಅವರಿಗೆ ಅಗತ್ಯವಿರುವ ನೀರು ಮತ್ತು ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಟರ್ಮಿನಲ್ನ ಹೊರಗೆ ಹೆಚ್ಚುವರಿ ಟೆಂಟ್ಗಳನ್ನು ನಿರ್ಮಿಸಿ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗಿದೆ.
ವಿಮಾನ ದರ ಏರಿಕೆಗೆ ಕಡಿವಾಣ
ಒಂದು ಹಂತದಲ್ಲಿ ವಿಮಾನ ಟಿಕೆಟ್ ದರವು 20 ಸಾವಿರ ರೂಪಾಯಿಗಳನ್ನು ಮೀರಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ತಕ್ಷಣ ಮಧ್ಯಪ್ರವೇಶಿಸಿದ್ದಾರೆ. ಅವರು ವಿಮಾನಯಾನ ಸಂಸ್ಥೆಗಳಿಗೆ ಪ್ರಯಾಣ ದರವನ್ನು ವಿಪರೀತವಾಗಿ ಹೆಚ್ಚಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದರ ಜೊತೆಗೆ, ಟಿಕೆಟ್ ರದ್ದತಿ ಮತ್ತು ಮರುನಿಗದಿ ಶುಲ್ಕವನ್ನು ವಿಧಿಸದಂತೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದಾರೆ.