
ಸ್ಕಾಟ್ಲೆಂಡ್ನಲ್ಲಿ ಹಿಂದೂಫೋಬಿಯಾ (Hinduphobia in Scotland) ನಡೆಯುತ್ತಿರುವುದನ್ನು ಖಂಡಿಸಿ ಅಲ್ಲಿನ ಸಂಸತ್ತಿನಲ್ಲಿ ನಿರ್ಣಯ ಮಂಡಿಸಲಾಗಿದೆ. ಎಡಿನ್ಬರ್ಗ್ ಈಸ್ಟರ್ನ್ನ ಆಲ್ಬಾ ಪಕ್ಷದ (Alba party) ಸಂಸದೆ ಆಶ್ ರೇಗನ್ (Ash Regan) ಅವರು ಈ ನಿರ್ಣಯವನ್ನು ಮಂಡಿಸಿದ್ದು, ಸ್ಕಾಟ್ಲೆಂಡ್ನಲ್ಲಿ ಹಿಂದೂಗಳಿಗೆ ತಾರತಮ್ಯ ಮತ್ತು ನಿರ್ಲಕ್ಷ್ಯ ಉಂಟಾಗುತ್ತಿದೆ ಎಂಬ ವರದಿಯೊಂದನ್ನು ಬೆಂಬಲಿಸಿದ್ದಾರೆ.
ಈ ಕ್ರಮವು ಸ್ಕಾಟ್ಲೆಂಡ್ನಲ್ಲಿ ಹಿಂದೂಗಳ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಉದ್ದೇಶವನ್ನು ಹೊಂದಿದೆ. ಸ್ಕಾಟ್ಲೆಂಡ್ ಸಂಸತ್ತಿನಲ್ಲಿ ಹಿಂದೂಫೋಬಿಯಾ (Hinduphobia) ಕುರಿತು ನೇರ ಚರ್ಚೆ ನಡೆಯುತ್ತಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
ಕಳೆದ ವಾರ ಸ್ಕಾಟ್ಲೆಂಡ್ನ ಗಾಂಧಿಯನ್ ಪೀಸ್ ಸೊಸೈಟಿಯು ಹಿಂದೂಗಳ ವಿರುದ್ಧ ನಡೆಯುತ್ತಿರುವ ವಿವಿಧ ಹಂತದ ತಾರತಮ್ಯಗಳನ್ನು ವಿವರಿಸುವ ವರದಿಯನ್ನು ಬಿಡುಗಡೆ ಮಾಡಿತ್ತು. ಆಶ್ ರೇಗನ್ ಅವರು ಮಂಡಿಸಿದ ನಿರ್ಣಯದಲ್ಲಿ, “ಸ್ಕಾಟ್ಲೆಂಡ್ನಲ್ಲಿ ಹಿಂದೂ ಸಮುದಾಯದ ವಿರುದ್ಧ ಪೂರ್ವಗ್ರಹ ಪೀಡಿತ ಧೋರಣೆಯನ್ನು ಪರಿಹರಿಸಲು ಗಾಂಧಿಯನ್ ಪೀಸ್ ಸೊಸೈಟಿಯ ಕಾರ್ಯವನ್ನು ಸಂಸತ್ತು ಶ್ಲಾಘಿಸುತ್ತದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮತಾಂಧರ ಅಟ್ಟಹಾಸಕ್ಕೆ ಹಿಂದೂ ನಾಯಕನ ಭೀಕರ ಹತ್ಯೆ
ಆಶ್ ರೇಗನ್ ಅವರ ಆಲ್ಬಾ ಪಕ್ಷವು ಸ್ಕಾಟ್ಲೆಂಡ್ನಲ್ಲಿ ದೊಡ್ಡ ಪಕ್ಷವಲ್ಲದಿದ್ದರೂ, ಅವರ ನಿರ್ಣಯಕ್ಕೆ ಬಹುತೇಕ ಎಲ್ಲಾ ಪಕ್ಷಗಳ ಸದಸ್ಯರು ಬೆಂಬಲ ಸೂಚಿಸಿರುವುದು ಮಹತ್ವದ ಸಂಗತಿಯಾಗಿದೆ. ಧ್ರುವ ಕುಮಾರ್, ನೀಲ್ ಲಾಲ್, ಸುಖಿ ಬೇನ್ಸ್, ಅನುರಂಜನ್ ಝಾ ಮತ್ತು ಅಜಿತ್ ತ್ರಿವೇದಿ ಅವರು ‘ಹಿಂದೂಫೋಬಿಯಾ ಇನ್ ಸ್ಕಾಟ್ಲೆಂಡ್’ ಎಂಬ ವರದಿಯನ್ನು ರಚಿಸಿದ್ದಾರೆ. ಸ್ಕಾಟ್ಲೆಂಡ್ನಲ್ಲಿ ಹಿಂದೂಗಳ ಸಮಸ್ಯೆಗಳ ಕುರಿತು ಆಳವಾದ ಅಧ್ಯಯನ ನಡೆಸಿ ವರದಿ ತಯಾರಿಸಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
“ಪೂಜಾ ಸ್ಥಳಗಳ ಮೇಲೆ ದಾಳಿಯಾದರೆ ಅಥವಾ ಕುಟುಂಬಗಳನ್ನು ಅವಹೇಳನ ಮಾಡಿದರೆ, ಅದು ಕೇವಲ ಹಿಂದೂ ಸಮುದಾಯದ ಮೇಲಿನ ಆಕ್ರಮಣವಲ್ಲ, ಬದಲಾಗಿ ಸ್ಕಾಟ್ಲೆಂಡ್ನ ಸಹಿಷ್ಣುತೆಯ ಮೌಲ್ಯಗಳಿಗೂ ಧಕ್ಕೆ ತಂದಂತಾಗುತ್ತದೆ. ಈ ವರದಿಯು ನಮ್ಮ ಸಮಾಜಕ್ಕೆ ಒಂದು ಕನ್ನಡಿಯಿದ್ದಂತೆ” ಎಂದು ಸ್ಕಾಟ್ಲೆಂಡ್ ಮತ್ತು ಯುಕೆಯ ಇಂಡಿಯನ್ ಕೌನ್ಸಿಲ್ ಅಧ್ಯಕ್ಷ ನೀಲ್ ಲಾಲ್ ಅಭಿಪ್ರಾಯಪಟ್ಟಿದ್ದಾರೆ.
ವರದಿಯ ಲೇಖಕರಾದ ಅನುರಂಜನ್ ಝಾ ಮತ್ತು ಧ್ರುವ ಕುಮಾರ್ ಅವರು, “ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ನಂಬಿಕೆಯ ಧರ್ಮವನ್ನು ಯಾವುದೇ ಭಯವಿಲ್ಲದೆ ಆಚರಿಸುವಂತಹ ವಾತಾವರಣ ನಿರ್ಮಾಣವಾಗಬೇಕು ಎಂಬುದು ನಮ್ಮ ಆಶಯ. ಈ ವರದಿಯು ಯಾವುದೇ ಭೇದವನ್ನು ಸೃಷ್ಟಿಸುತ್ತಿಲ್ಲ, ಬದಲಾಗಿ ಒಗ್ಗಟ್ಟನ್ನು ಬಯಸುತ್ತದೆ. ಹಿಂದೂಫೋಬಿಯಾ ಬಗ್ಗೆ ಮಾತನಾಡುತ್ತಾ, ನಾವು ಎಲ್ಲಾ ಸಮುದಾಯಗಳ ನಡುವೆ ಬಾಂಧವ್ಯವನ್ನು ಬೆಸೆಯುತ್ತಿದ್ದೇವೆ” ಎಂದು ಹೇಳಿದ್ದಾರೆ.
Sri Rama is a seasoned journalist with four years of experience, specializing in capturing and analyzing the latest news and trending stories. He brings extensive expertise in news collection, reporting, and interviewing across a broad spectrum of topics, including politics.