
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನಡೆದ ಸರಣಿ ಉನ್ನತ ಮಟ್ಟದ ಸಭೆಗಳ ನಂತರ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ. ದೇಶಾದ್ಯಂತ ಜಾತಿ ಗಣತಿ ಮತ್ತು ಜನಗಣತಿಯನ್ನು ಏಕಕಾಲದಲ್ಲಿ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ.
ರಾಜಕೀಯ ವ್ಯವಹಾರಗಳ ಸಚಿವ ಸಂಪುಟ (ಸಿಸಿಪಿಎ) ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಅದರಂತೆ, ಕೇಂದ್ರ ಸರ್ಕಾರವೇ ದೇಶಾದ್ಯಂತ ಸಮಗ್ರವಾಗಿ ಸರ್ವೇ ನಡೆಸಿ ಜಾತಿ ಗಣತಿ ಮತ್ತು ಜನಗಣತಿಯನ್ನು ನಡೆಸಲಿದೆ. ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಮೋದಿ ಸಭೆಯ ಪ್ರಮುಖಾಂಶಗಳು:
- ದೇಶಾದ್ಯಂತ ಜಾತಿ ಗಣತಿ ಮತ್ತು ಜನಗಣತಿ: ಐದಾರು ವರ್ಷಗಳ ನಂತರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
- ಜನಗಣತಿಯಲ್ಲೇ ಜಾತಿ ಗಣತಿ ಸೇರ್ಪಡೆ: ಜಾತಿ ಗಣತಿಯ ಮೂಲ ಮಾಹಿತಿಯನ್ನು ಜನಗಣತಿಯಲ್ಲೇ ಸೇರಿಸಲು ನಿರ್ಧರಿಸಲಾಗಿದೆ.
- ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ: ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) ಹೆಚ್ಚಳ ಮಾಡಲಾಗಿದೆ. ಕ್ವಿಂಟಾಲ್ಗೆ ಕನಿಷ್ಠ 355 ರೂ. ನಿಗದಿಪಡಿಸಲಾಗಿದೆ.
- ಶಿಲ್ಲಾಂಗ್ನಿಂದ ಸಿಲ್ವರ್ ಕಾರಿಡಾರ್ ಯೋಜನೆಗೆ ಅನುಮೋದನೆ: ಮೇಘಾಲಯದಿಂದ ಅಸ್ಸಾಂಗೆ ಸಂಪರ್ಕ ಕಲ್ಪಿಸುವ 166.8 ಕಿಲೋ ಮೀಟರ್ ಉದ್ದದ ಚತುಷ್ಪಥ ರಸ್ತೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
- ಪಾಕ್ ವಿರುದ್ಧದ ಕ್ರಮ ಗೌಪ್ಯ: ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಕೈಗೊಳ್ಳುವ ಕ್ರಮಗಳ ಕುರಿತು ಚರ್ಚೆ ನಡೆದರೂ, ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಜಾತಿ ಗಣತಿಯ ವಿಷಯದಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ದೇಶದಲ್ಲಿ 1947 ರಿಂದ ಜಾತಿ ಗಣತಿ ನಡೆದಿಲ್ಲ. ಇದಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರವೇ ಕಾರಣ. ಕಾಂಗ್ರೆಸ್ ಕೇವಲ ಜಾತಿ ಸಮೀಕ್ಷೆಗಳನ್ನು ನಡೆಸಿದೆ, ಅದೂ ಕೂಡ ರಾಜಕೀಯ ಉದ್ದೇಶದಿಂದ. ಅನೇಕ ರಾಜ್ಯಗಳಲ್ಲಿ ನಡೆದ ಜಾತಿ ಸಮೀಕ್ಷೆಗಳು ಕೇವಲ ರಾಜಕೀಯ ಲಾಭಕ್ಕಾಗಿ ಮಾಡಲಾದ ಪ್ರಯತ್ನಗಳು” ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಕ್ಕೆ ನಡೆಯಿತಾ ಕೊಲೆ?
“ಜಾತಿ ಗಣತಿಯ ಮೂಲವನ್ನು ಜನಗಣತಿಯಲ್ಲೇ ಸೇರಿಸುವುದು ನಮ್ಮ ಸರ್ಕಾರದ ಮಹತ್ವದ ನಿರ್ಧಾರ. ಈ ಮೂಲಕ ದೇಶದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯ ಕುರಿತು ನಿಖರವಾದ ಮಾಹಿತಿ ಲಭ್ಯವಾಗಲಿದೆ” ಎಂದು ಅಶ್ವಿನಿ ವೈಷ್ಣವ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಈ ಮಹತ್ವದ ನಿರ್ಧಾರವು ದೇಶದ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ. ಜಾತಿ ಗಣತಿಯಿಂದ ಲಭ್ಯವಾಗುವ ಅಂಕಿಅಂಶಗಳು ಸರ್ಕಾರದ ಮುಂದಿನ ಯೋಜನೆಗಳಿಗೆ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ನಾನು ಭಾರತವನ್ನು ದ್ವೇಷಿಸುತ್ತೇನೆ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ!