ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಈ ಕೃತ್ಯವನ್ನು ಖಂಡಿಸಿದ್ದಾರೆ ಮತ್ತು ಸಂತಾಪ ಸೂಚಿಸಿದ್ದಾರೆ. ಈ ದುರಂತದಲ್ಲಿ ಪತಿಯನ್ನು ಕಳೆದುಕೊಂಡ ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಅವರ ಪತ್ನಿ ಪಲ್ಲವಿ, ತಮ್ಮ ಆಘಾತಕಾರಿ ಅನುಭವ ಮತ್ತು ದುಃಖವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. (ನಿನ್ನನ್ನು ಬಿಡ್ತೇನೆ, ಮೋದಿಗೆ ಹೋಗಿ ಹೇಳು! ಪತ್ನಿಯ ಹೃದಯ ವಿದ್ರಾವಕ ಮಾತು!)
ತಮ್ಮ ಮಗನಿಗೆ ಬೇಸಿಗೆ ರಜೆ ಸಿಕ್ಕಿದ್ದರಿಂದ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ. ದಾಳಿಯಿಂದ ಪಾರಾದ ಪಲ್ಲವಿ, ತಮಗೆ ಎದುರಾದ ಆಘಾತಕಾರಿ ಕ್ಷಣಗಳನ್ನು ವಿವರಿಸುತ್ತಾ, “ನಾನು, ನನ್ನ ಪತಿ ಮತ್ತು ಮಗ ಕಾಶ್ಮೀರಕ್ಕೆ ಹೋಗಿದ್ದೆವು. ಪಹಲ್ಗಾಮ್ನಲ್ಲಿ ಮಧ್ಯಾಹ್ನ 2:30ರ ಸುಮಾರಿಗೆ ಈ ದಾಳಿ ನಡೆಯಿತು. ನನ್ನ ಪತಿಯನ್ನು ನನ್ನ ಕಣ್ಣೆದುರೇ ಕೊಂದರು. ಅದನ್ನು ನೆನೆಸಿಕೊಂಡರೆ ಈಗಲೂ ಒಂದು ಕೆಟ್ಟ ಕನಸಿನಂತೆ ಭಾಸವಾಗುತ್ತಿದೆ” ಎಂದು ದುಃಖದಿಂದ ನುಡಿದರು.
“ಅವರು ದಾಳಿ ಮಾಡಿದ್ದು ನೋಡಿದರೆ, ಹಿಂದೂಗಳನ್ನು ಗುರಿಯಾಗಿಸಿಕೊಂಡೇ ಬಂದಂತೆ ತೋರುತ್ತಿತ್ತು. ಮೂರರಿಂದ ನಾಲ್ಕು ಜನ ನಮ್ಮ ಮೇಲೆ ದಾಳಿ ಮಾಡಿದರು. ನಾನು ಅವರಿಗೆ ಹೇಳಿದೆ. ನನ್ನ ಪತಿಯನ್ನು ಕೊಂದಿದ್ದೀರಿ, ನನ್ನನ್ನೂ ಕೊಂದುಬಿಡಿ ಎಂದು ಹೇಳಿದೆ. ಆಗ ಅವರಲ್ಲಿದ್ದ ಒಬ್ಬ ʻನಾನು ನಿನ್ನನ್ನು ಕೊಲ್ಲುವುದಿಲ್ಲ, ಹೋಗಿ ಮೋದಿಗೆ ಇದನ್ನು ಹೇಳುʼ ಅಂತ ಹೇಳಿದ ಎಂದು ಅವರು ತಿಳಿಸಿದರು.”
ಇದನ್ನೂ ಓದಿ: ಪ್ರವಾಸಿಗರ ಮೇಲೆ ಉಗ್ರರ ದಾಳಿ! 24 ಮಂದಿ ಸಾವು! ಪ್ರಧಾನಿ ಮೋದಿ ಖಂಡನೆ!
“ನಾವು ಸುಮಾರು 500 ಜನರಿದ್ದೆವು. ಅದು ಮಿನಿ ಸ್ವಿಟ್ಜರ್ಲೆಂಡ್ ಎಂಬ ಒಂದು ಸ್ಥಳ. ಆಗಷ್ಟೇ ಕುದುರೆಯಿಂದ ಇಳಿದಿದ್ದೆವು. ನನ್ನ ಮಗ ಬೆಳಗ್ಗೆಯಿಂದ ಏನೂ ತಿಂದಿರಲಿಲ್ಲ. ಅಲ್ಲೇ ಏನಾದರೂ ತಿಂಡಿ ತೆಗೆದುಕೊಳ್ಳಲು ನಮ್ಮ ಮನೆಯವರು ಅಂಗಡಿಯವರ ಬಳಿ ವಿಚಾರಿಸಲು ಹೋದರು. ನನ್ನ ಮಗನನ್ನು ಕರೆಯಲು ನಾನು ಹೋದೆ. ಆಗ ಗುಂಡಿನ ಸದ್ದು ಕೇಳಿಸಿತು. ನಾವೆಲ್ಲಾ ಸೈನಿಕರು ಇರಬೇಕು ಎಂದುಕೊಂಡೆವು.
ನಾನು ಈ ಕಡೆ ತಿರುಗಿ ನೋಡುವಷ್ಟರಲ್ಲಿ ಬೇರೆಯವರೆಲ್ಲಾ ಓಡುತ್ತಿದ್ದರು. ನನ್ನ ಮಗನನ್ನು ಕರೆದುಕೊಳ್ಳಲು ನೋಡುತ್ತಿದ್ದೆ, ಅಷ್ಟರಲ್ಲಿ ನನ್ನ ಮನೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರಿಗೆ ತಲೆಗೆ ಗುಂಡು ಹೊಡೆದಿದ್ದಾರೆ ಎಂದು ತಿಳಿಯಿತು” ಎಂದು ಪಲ್ಲವಿ ಆಘಾತದಿಂದ ವಿವರಿಸಿದರು.”ಮೂವರು ಮುಸ್ಲಿಮರು ಬಿಸ್ಮಿಲ್ಲಾ, ಬಿಸ್ಮಿಲ್ಲಾ ಅಂತಿದ್ದರು. ನಾನು ಅಲ್ಲೇ ಇದ್ದ ಭಯೋತ್ಪಾದಕನ ಬಳಿ ನನ್ನ ಪತಿಯನ್ನು ಸಾಯಿಸಿದ್ದೀರಾ, ನನ್ನನ್ನು ಸಾಯಿಸಿ ಎಂದು ಕೇಳಿದೆ. ನನ್ನ ಮಗ ‘ಏ ನಾಯಿ… ನನ್ನ ತಂದೆಯನ್ನು ಕೊಂದೆಯಲ್ಲಾ, ನಮ್ಮನ್ನು ಕೊಂದುಬಿಡು’ ಎಂದ. ಆಗ ಅವರು ‘ಇಲ್ಲ ನಿಮ್ಮನ್ನು ಸಾಯಿಸಲ್ಲ. ಮೋದಿಗೆ ಹೋಗಿ ಹೇಳು’ ಎಂದು ಹೋದರು.
ನಮ್ಮ ಎದುರಿಗೆ ಓಡಾಡುತ್ತಿದ್ದರು. ಯಾರೂ ಇರಲಿಲ್ಲ.. ಸೈನಿಕರೂ ಯಾರೂ ಇರಲಿಲ್ಲ. ಮಾಮೂಲಿ ಬಟ್ಟೆಯಲ್ಲಿ ಇದ್ದರು. ಹೊಸದಾಗಿ ಮದುವೆಯಾದ ದಂಪತಿ ಬಂದಿದ್ದರು. ಗಂಡಸರಿಗೆ ಮಾತ್ರ ಹೊಡೆದರು. ಹೆಂಗಸರು, ಮಕ್ಕಳಿಗೆ ಏನೂ ಆಗಿಲ್ಲ. ನಮಗೆ ನಮ್ಮ ಮನೆಯವರ ಮೃತದೇಹ ಬೇಗ ಸಿಗಬೇಕು, ಫ್ಲೈಟ್ ವ್ಯವಸ್ಥೆ ಮಾಡಿ ಕಳಿಸಿ ಎಂದು ಒತ್ತಾಯಿಸಿದ್ದಾರೆ.”
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
