
ಸಿಇಟಿ (KCET Exam) ಪರೀಕ್ಷೆಯ ಸಂದರ್ಭದಲ್ಲಿ ಜನಿವಾರದ ವಿಚಾರಕ್ಕೆ ಸಿಬ್ಬಂದಿಯೊಬ್ಬರು ಅನುಚಿತವಾಗಿ ವರ್ತಿಸಿದ್ದರಿಂದ ವಿದ್ಯಾರ್ಥಿಯೋರ್ವನ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆ ಉಂಟಾಯಿತು. ಈ ಘಟನೆ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ, ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಸಂಬಂಧಪಟ್ಟ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಒಬ್ಬ ವಿದ್ಯಾರ್ಥಿಯ ಅಚಲವಾದ ಧಾರ್ಮಿಕ ನಂಬಿಕೆ ಮತ್ತು ಉಜ್ವಲ ಭವಿಷ್ಯದ ಕನಸುಗಳನ್ನು ಸಿಬ್ಬಂದಿಯೊಬ್ಬರ ಯಡವಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕುವಂತಾಯಿತು. ಆ ಸಿಬ್ಬಂದಿಯ ಬೇಜವಾಬ್ದಾರಿಯುತ ನಡವಳಿಕೆಯಿಂದಾಗಿ ವರ್ಷವಿಡೀ ಕಷ್ಟಪಟ್ಟು ಓದಿದ ವಿದ್ಯಾರ್ಥಿಯ ಕನಸುಗಳು ನುಚ್ಚುನೂರಾದವು. ಧಾರ್ಮಿಕ ಭಾವನೆಗಳೊಂದಿಗೆ ಆಟವಾಡಿದ ಶಿವಮೊಗ್ಗ ಮತ್ತು ಬೀದರ್ ಕಾಲೇಜಿನ ಸಿಬ್ಬಂದಿಯನ್ನು ಅಮಾನತುಗೊಳಿಸುವ ಮೂಲಕ ತಕ್ಕ ಶಿಕ್ಷೆ ನೀಡಲಾಗಿದೆ.
ಬೀದರ್ನ ಸಾಯಿ ಸ್ಫೂರ್ತಿ ಕಾಲೇಜಿನ ಪ್ರಾಂಶುಪಾಲ ಮತ್ತು ಎಸ್ಡಿಎ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಪ್ರಾಂಶುಪಾಲ ಚಂದ್ರಶೇಖರ ಬಿರಾದಾರ ಮತ್ತು ಎಸ್ಡಿಎ ಸಂತೋಷ್ ಪವಾರ್ ಅವರನ್ನು ಅವರ ಹುದ್ದೆಗಳಿಂದ ವಜಾಗೊಳಿಸಲಾಗಿದೆ. ಸಾಯಿದೀಪ್ ಎಜುಕೇಶನ್ ಟ್ರಸ್ಟ್ ಈ ಕ್ರಮ ಕೈಗೊಂಡಿದೆ. ಜಿಲ್ಲಾಧಿಕಾರಿ ಮತ್ತು ಪಿಯು ಬೋರ್ಡ್ ನೀಡಿದ ಸೂಚನೆಗಳ ನಂತರ ಟ್ರಸ್ಟ್ ಈ ನಿರ್ಧಾರಕ್ಕೆ ಬಂದಿದೆ.
ಇದನ್ನೂ ಓದಿ: ಜನಿವಾರ ತೆಗೆಸಿದ್ದು ಖಂಡಿಸಿ ಪರೀಕ್ಷೆ ತ್ಯಜಿಸಿದ ವಿದ್ಯಾರ್ಥಿಗೆ ರಾಘವೇಶ್ವರ ಶ್ರೀಗಳ ಸಹಾಯಹಸ್ತ
ಶಿಮೊಗ್ಗದಲ್ಲಿ ಇಬ್ಬರು ಸಿಬ್ಬಂದಿಯನ್ನುಅಮಾನತುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದಿಚುಂಚನಗಿರಿ ಕಾಲೇಜಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈ ಕ್ರಮ ಕೈಗೊಂಡಿದ್ದಾರೆ. ಬೀದರ್ನಲ್ಲಿ ವಿದ್ಯಾರ್ಥಿಗೆ ಆದ ಅನ್ಯಾಯವನ್ನು ಖಂಡಿಸಿ ಗದಗ ಬ್ರಾಹ್ಮಣ ಸಂಘವು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಸಿಬ್ಬಂದಿ ಯಾರ ಪ್ರೇರಣೆಯಿಂದ ಜನಿವಾರ ತೆಗೆದರು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಒಟ್ಟಾರೆಯಾಗಿ, ಈ ಘಟನೆಯಿಂದ ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಜನಿವಾರ ತೆಗೆದ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಆದರೆ, ಈ ಯಡವಟ್ಟಿನಿಂದಾಗಿ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಈಗ ಪ್ರಶ್ನೆಗಳು ಉದ್ಭವಿಸಿವೆ. ಅವರ ಮುಂದಿನ ವಿದ್ಯಾಭ್ಯಾಸದ ಹಾದಿ ಹೇಗಿರಲಿದೆ, ಅವರಿಗೆ ನ್ಯಾಯ ಸಿಗುತ್ತದೆಯೇ ಎಂಬ ಚಿಂತೆ ಎಲ್ಲರನ್ನು ಕಾಡುತ್ತಿದೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.