
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ, ಭೂಮಿಯ ಮೇಲೆ ಅವು ಕೇವಲ ನೆಪ ಮಾತ್ರ ಎಂಬ ಮಾತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅಲ್ಲಲ್ಲಿ ಕೆಲವು ವಿಚಿತ್ರ ಪ್ರೇಮ ಕಥೆಗಳು ಬೆಳಕಿಗೆ ಬರುತ್ತವೆ. ಇತ್ತೀಚೆಗೆ ಕ್ಯಾಬ್ ಚಾಲಕನ ಗೇರ್ ಬದಲಾಯಿಸುವ ಶೈಲಿಗೆ ಮನಸೋತ ಯುವತಿಯೊಬ್ಬಳು ಆತನನ್ನು ಮದುವೆಯಾದ ಘಟನೆ ವರದಿಯಾಗಿತ್ತು. ಇದೀಗ ಮತ್ತೊಂದು ಅಚ್ಚರಿಯ ಪ್ರೇಮ ಕಥೆ ಬೆಳಕಿಗೆ ಬಂದಿದೆ. ಎಂಬಿಬಿಎಸ್ ವೈದ್ಯೆಯೊಬ್ಬರು ತಮ್ಮ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ನೆಲ ಒರೆಸುವ ವಿಶಿಷ್ಟ ಶೈಲಿಗೆ ಮಾರುಹೋಗಿ ಅವನನ್ನೇ ವಿವಾಹವಾಗಿದ್ದಾರೆ.
ಹೌದು, ಈ ಅಚ್ಚರಿಯ ಪ್ರೇಮಕಥೆ ನಡೆದಿರುವುದು ಪಾಕಿಸ್ತಾನದಲ್ಲಿ. ಕಿಶ್ವರ್ ಸಾಹಿಬಾ ಎಂಬ ವೈದ್ಯೆ ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಶಹಜಾದ್ನನ್ನು ಮದುವೆಯಾಗಿದ್ದಾರೆ. “ಮೇರಾ ಪಾಕಿಸ್ತಾನ್” ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಈ ದಂಪತಿ ತಮ್ಮ ವಿಶಿಷ್ಟ ಪ್ರೇಮ ಕಥೆಯನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಓಕಾರಾ ಜಿಲ್ಲೆಯ ದೀಪಲ್ಪುರ ಪಟ್ಟಣದಲ್ಲಿ ವಾಸಿಸುವ ಯೂಟ್ಯೂಬರ್ ಹರೀಶ್ ಭಟ್ಟಿ ಅವರೊಂದಿಗೆ ಮಾತನಾಡಿದ ಈ ದಂಪತಿ, ತಾವು ಈಗಲೂ ಕೆಲವು ಸವಾಲುಗಳನ್ನು ಎದುರಿಸುತ್ತಿರುವುದಾಗಿ ಹೇಳುತ್ತಾ ತಮ್ಮ ಪ್ರೇಮದ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಕೆಲವು ವರ್ಷಗಳ ಹಿಂದಿನ ಈ ವಿಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶಹಜಾದ್ ಅವರನ್ನು ಮೊದಲ ಬಾರಿಗೆ ನೋಡಿದಾಗ ಅವರು ಕೇವಲ ಚಹಾ ಮಾಡುವವರೋ ಅಥವಾ ಕ್ಲೀನರೋ ಎಂದು ನನಗೆ ಅನ್ನಿಸಲೇ ಇಲ್ಲ. ಅವರು ತಮ್ಮದೇ ಆದ ಸಣ್ಣ ವ್ಯವಹಾರವನ್ನು ನಡೆಸುತ್ತಿದ್ದರು ಮತ್ತು ಬಹಳ ಸರಳ ವ್ಯಕ್ತಿಯಾಗಿದ್ದರು. ಅವರ ಈ ಗುಣ ನನಗೆ ಬಹಳ ಇಷ್ಟವಾಯಿತು. ಅವರು ಆಸ್ಪತ್ರೆಯನ್ನು ಸ್ವಚ್ಛಗೊಳುತ್ತಿದ್ದ ರೀತಿ ನನ್ನನ್ನು ಆಕರ್ಷಿಸಿತು. ಮದುವೆಯಾದರೆ ಇವರನ್ನೇ ಆಗಬೇಕು ಎಂದು ನಾನು ಅಂದುಕೊಂಡೆ. ಹಾಗಾಗಿ ನಾನೇ ಮೊದಲು ಹೋಗಿ ಅವರಿಗೆ ಪ್ರಪೋಸ್ ಮಾಡಿದೆ” ಎಂದು ವೈದ್ಯೆ ಕಿಶ್ವರ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಜೀವನದ ಇಂತಹ ಮಹತ್ವದ ನಿರ್ಧಾರವನ್ನೆಲ್ಲಾ ಕೇವಲ ಒಂದೇ ದಿನದಲ್ಲಿ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ. ಸರಳ ವ್ಯಕ್ತಿಯೊಬ್ಬರ ಪ್ರಾಮಾಣಿಕತೆಗೆ ಮನಸೋತ ವೈದ್ಯೆಯ ಪ್ರೇಮಕಥೆ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ.
ವೈದ್ಯೆ ಕಿಶ್ವರ್ ಅವರು ತಾವು ಮತ್ತು ಶಹಜಾದ್ ಹೇಗೆ ಭೇಟಿಯಾದರು ಮತ್ತು ಅವರ ನಡುವೆ ಸಂಭಾಷಣೆ ಹೇಗೆ ಪ್ರಾರಂಭವಾಯಿತು ಎಂಬುದನ್ನು ವಿವರಿಸಿದ್ದಾರೆ. “ಶಹಜಾದ್ ಮೊದಲು ಮೂವರು ವೈದ್ಯರ ಕೊಠಡಿಗಳನ್ನು ಸ್ವಚ್ಛಗೊಳಿಸುತ್ತಿದ್ದ ಮತ್ತು ಅವರೆಲ್ಲರಿಗೂ ಚಹಾ ತಂದುಕೊಡುತ್ತಿದ್ದ. ಆತನ ಈ ಕೆಲಸ ನನಗೆ ಇಷ್ಟವಾಯಿತು. ಒಂದು ದಿನ ನಾನೇ ಅವನ ಫೋನ್ ನಂಬರ್ ತೆಗೆದುಕೊಂಡು ಮಾತನಾಡಲು ಶುರು ಮಾಡಿದೆ.
ಇದನ್ನೂ ಓದಿ: ಶಾಕಿಂಗ್! ಕೇವಲ ಜ್ವರಕ್ಕೆ 82 ಲಕ್ಷ ರೂ. ಬಿಲ್!
ನಂತರ ಶಹಜಾದ್ ಹಾಕುತ್ತಿದ್ದ ಪೋಸ್ಟ್ಗಳನ್ನು ಲೈಕ್ ಮಾಡಲು ಪ್ರಾರಂಭಿಸಿದೆ. ಒಂದು ದಿನ ಅವನನ್ನು ನನ್ನ ಕೋಣೆಗೆ ಕರೆದು ನನ್ನ ಪ್ರೀತಿಯನ್ನು ವ್ಯಕ್ತಪಡಿಸಿದೆ” ಎಂದು ಕಿಶ್ವರ್ ಹೇಳಿದ್ದಾರೆ. ಇದನ್ನು ಕೇಳಿದ ಶಹಜಾದ್ಗೆ ಮೊದಲು ಆಶ್ಚರ್ಯವಾಯಿತು. ನಂಬಲು ಸಾಧ್ಯವಾಗದ ಕಾರಣ ಆತ ಆಘಾತಕ್ಕೊಳಗಾದ. ಕೊನೆಗೆ ಕಿಶ್ವರ್ ನಿಜ ಹೇಳುತ್ತಿದ್ದಾರೆ ಎಂದು ತಿಳಿದಾಗ ಅವನಿಗೆ ಜ್ವರ ಕೂಡ ಬಂದಿತ್ತಂತೆ. “ನಾನೇ ಹೋಗಿ ಅವನಿಗೆ ಉಪಚರಿಸಿದೆ. ಅಲ್ಲಿಂದ ನಮ್ಮ ಪ್ರೇಮಕಥೆ ಪ್ರಾರಂಭವಾಯಿತು” ಎಂದು ಕಿಶ್ವರ್ ತಮ್ಮ ವಿಚಿತ್ರ ಪ್ರೇಮ ಪಯಣವನ್ನು ಹಂಚಿಕೊಂಡಿದ್ದಾರೆ.
ಮದುವೆಯ ನಂತರ, ಕಿಶ್ವರ್ ಅವರು ತಮ್ಮ ಸ್ನೇಹಿತರಿಂದ ಟೀಕೆಗಳನ್ನು ಎದುರಿಸಬೇಕಾಗಿ ಬಂದಿದ್ದರಿಂದ ಆಸ್ಪತ್ರೆಯ ತಮ್ಮ ಕೆಲಸವನ್ನು ತೊರೆದರು. ಇದೀಗ ಈ ಜೋಡಿಯು ಒಟ್ಟಾಗಿ ಒಂದು ಕ್ಲಿನಿಕ್ ಅನ್ನು ತೆರೆಯುವ ಯೋಜನೆಯಲ್ಲಿದೆ. ತಮ್ಮ ಜೀವನದ ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳಲು ಅವರು ಒಂದು ಯೂಟ್ಯೂಬ್ ಚಾನೆಲ್ ಅನ್ನು ಸಹ ನಡೆಸುತ್ತಿದ್ದಾರೆ. ಇವರ ಈ ವಿಭಿನ್ನ ಪ್ರೇಮ ಕಥೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ಮನುಷ್ಯರಂತೆ ಮಾತಾಡೋ ಕಾಗೆ! ವಿಡಿಯೋ ವೈರಲ್
ಆದರೂ, ಈ ಹೃದಯಸ್ಪರ್ಶಿ ಕಥೆಯು ಅನೇಕ ಅಂತರ್ಜಾಲ ಬಳಕೆದಾರರನ್ನು ಸಂತೋಷಪಡಿಸಿದೆ. ಒಬ್ಬರು “ಅದ್ಭುತ, ಸೌಂದರ್ಯವು ಕಾಣುವವರ ಕಣ್ಣಿನಲ್ಲಿದೆ” ಎಂದು ಪ್ರತಿಕ್ರಿಯಿಸಿದರೆ, ಮತ್ತೊಬ್ಬರು “ಇದು ಒಂದು ಸುಂದರವಾದ ಪ್ರೇಮ ಕಥೆ, ಈ ಜೋಡಿ ಅದ್ಭುತವಾಗಿದೆ” ಎಂದು ಹೊಗಳಿದ್ದಾರೆ. ಒಟ್ಟಾರೆಯಾಗಿ, ಈ ಅಸಾಮಾನ್ಯ ಪ್ರೇಮವು ಅನೇಕರಿಗೆ ಸ್ಫೂರ್ತಿಯ ಸೆಲೆಯಾಗಿದೆ.