
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM D K Shivakumar) ಅವರು ಧರ್ಮಸ್ಥಳಕ್ಕೆ (Dharmasthala) ಭೇಟಿ ನೀಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಶಕ್ತಿನಗರದಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿಯ (Shri Manjunatha Swamy) ದರ್ಶನ ಪಡೆದರು.
ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಇದೇ ವೇಳೆ ಅವರು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು (D.Veerendra Heggade) ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ, ಅವರು ಕಲ್ಯಾಣ ಮಂಟಪವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, “ನಾನು ರಾಜಕೀಯದಲ್ಲಿ ವಿವಿಧ ಹುದ್ದೆಗಳನ್ನು ಏರಿದರೂ, ಇಲ್ಲಿಗೆ ಮಂಜುನಾಥನ ಭಕ್ತನಾಗಿ ಬರುತ್ತೇನೆ. ಅಧಿಕಾರ ಬರುತ್ತದೆ, ಅಧಿಕಾರ ಹೋಗುತ್ತದೆ. ಇಲ್ಲಿ ಯಾವುದೂ ಶಾಶ್ವತವಲ್ಲ. ರಾಜನಾದವನೂ ಅಧಿಕಾರ ಕಳೆದುಕೊಳ್ಳುತ್ತಾನೆ, ರಾಜಕಾರಣಿಯಾದವನೂ ಅಧಿಕಾರ ಕಳೆದುಕೊಳ್ಳುತ್ತಾನೆ” ಎಂದು ಮಾರ್ಮಿಕವಾಗಿ ನುಡಿದರು.
ಇದನ್ನೂ ಓದಿ: ಹಿಂದೂಗಳೇ ಮತಾಂತರ ಮಾಡಿ ಚಕ್ರವರ್ತಿ ಸೂಲಿಬೆಲೆ ಕರೆ!
ಡಾ. ವೀರೇಂದ್ರ ಹೆಗ್ಗಡೆಯವರು ನಡೆದು ಬಂದ ಹಾದಿ ಮತ್ತು ರಾಜ್ಯಕ್ಕೆ ನೀಡಿದ ಮಾರ್ಗದರ್ಶನ ಬಹಳ ದೊಡ್ಡದು. ಭಕ್ತ ಮತ್ತು ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳವೇ ದೇವಾಲಯ. ಹೆಗ್ಗಡೆಯವರು ಮಾಡಿದ ಸಾಧನೆ ಧರ್ಮ ಮತ್ತು ಧಾರ್ಮಿಕ ಇತಿಹಾಸದಲ್ಲಿ ದಾಖಲಾಗಿದೆ. ನನ್ನ ತಮ್ಮ ಪ್ರತಿ ವರ್ಷ ಧರ್ಮಸ್ಥಳದಲ್ಲೇ ಹುಟ್ಟುಹಬ್ಬ ಆಚರಿಸುತ್ತಾನೆ. ನಾನು ಮತ್ತು ನನ್ನ ಕುಟುಂಬ ಕೂಡ ಇಲ್ಲಿಗೆ ಆಗಾಗ್ಗೆ ಬರುತ್ತೇವೆ ಎಂದು ಡಿ.ಕೆ.ಶಿವಕುಮಾರ್ ನೆನಪಿಸಿಕೊಂಡರು.
ನನ್ನ ಯಶಸ್ಸಿನಲ್ಲಿ ಈ ಶಿವನ ಕ್ಷೇತ್ರದ ಪಾಲು ದೊಡ್ಡದಿದೆ. ಮಂಜುನಾಥನನ್ನು ನಂಬಿದ ಯಾರಿಗೂ ತೊಂದರೆಯಾಗಿಲ್ಲ. ಕೆಲವರು ಧರ್ಮಸ್ಥಳದ ವಿಚಾರದಲ್ಲಿ ವಾದ ಮತ್ತು ಟೀಕೆಗಳನ್ನು ಮಾಡುತ್ತಾರೆ. ಶ್ರೀಗಳು ಜೈನರು, ಅವರು ಹೇಗೆ ಮಂಜುನಾಥನನ್ನು ನಂಬುತ್ತಾರೆ ಎಂದು ಪ್ರಶ್ನಿಸುತ್ತಾರೆ. ಇಂತಹ ವಾದ ಮಾಡುವ ನಾಯಕರು, ಸಮಾಜ ಸೇವಕರು ಮತ್ತು ಚಿಂತಕರು ಇದ್ದಾರೆ. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ.
ಇಂತಹ ಪವಿತ್ರವಾದ ಕ್ಷೇತ್ರವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕಿದೆ. ಸಣ್ಣಪುಟ್ಟ ಮಾತುಗಳನ್ನಾಡುವವರು ಮತ್ತು ಟೀಕೆ ಮಾಡುವವರು ಬೇಕಾದಷ್ಟು ಜನರಿದ್ದಾರೆ” ಎಂದು ಟೀಕಾಕಾರರಿಗೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
“ನಾನು ಶ್ರೀಗಳಿಗೆ ಹೇಳುವುದಿಷ್ಟೇ, ಟೀಕೆಗಳು ಸಾಯುತ್ತವೆ, ಮಾಡುವ ಕೆಲಸಗಳು ಉಳಿಯುತ್ತವೆ. ಹಾಗಾಗಿ ನೀವು ಯಾವುದಕ್ಕೂ ಅಂಜುವ ಸಂದರ್ಭವೇ ಇಲ್ಲ. ನನ್ನಂತಹ ಸಾವಿರಾರು ಜನ ಡಿ.ಕೆ.ಶಿವಕುಮಾರ್ ನಿಮ್ಮ ಬೆನ್ನಿಗೆ ನಿಲ್ಲಲು ಸಿದ್ಧರಿದ್ದೇವೆ. ನಿಮ್ಮ ಪರಿಶುದ್ಧವಾದ ಶ್ರಮ, ಸೇವೆ ಇಡೀ ರಾಷ್ಟ್ರದಲ್ಲಿ ನಾವು ಗಮನಿಸಿದ್ದೇವೆ. ಹಾಗಾಗಿ ನೀವು ಚಿಂತೆ ಮಾಡುವುದು ಬೇಡ, ಸಮಾಜ ಸೇವೆ ಮಾಡಿ. ಚಿಂತೆ ಮಾಡದೆ ಆರೋಗ್ಯ ಕಾಪಾಡಿಕೊಂಡು ಸೇವೆ ಮುಂದುವರೆಸಿ. ನನ್ನಂತಹ ನೂರಾರು ಡಿ.ಕೆ.ಶಿವಕುಮಾರ್ ಈ ಕ್ಷೇತ್ರವನ್ನು ಮತ್ತು ನಿಮ್ಮನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಾರೆ” ಎಂದು ಉಪಮುಖ್ಯಮಂತ್ರಿ ಭರವಸೆ ನೀಡಿದರು.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.