
ಪ್ಲಾಸ್ಟಿಕ್ ಇಂದು ನಮ್ಮ ಬದುಕಿನ ಬೇಲಿಯಂತಾಗಿದೆ. ತಿಂದದ್ದನ್ನು ಮುಚ್ಚಿಡಲು, ತಂದದ್ದನ್ನು ತುಂಬಿಡಲು ಪ್ಲಾಸ್ಟಿಕ್ ಬೇಕೇ ಬೇಕು. ಆದರೆ ಇದರ ಕರಾಳ ಮುಖ ಮಾತ್ರ ಭಯಾನಕ. ನಮ್ಮ ಆರೋಗ್ಯವನ್ನಷ್ಟೇ ಅಲ್ಲ, ಪರಿಸರದ ಅಮೂಲ್ಯ ಜೀವಿಗಳನ್ನೂ ಇದು ಬಲಿ ತೆಗೆದುಕೊಳ್ಳುತ್ತಿದೆ. ಅದರಲ್ಲೂ ಮುಗ್ಧ ಗೋವುಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ಸೇವಿಸಿ ನರಳುತ್ತಿರುವುದು ಒಂದು ನಿತ್ಯದ ದುರಂತ. ದಶಕಗಳು ಉರುಳಿದರೂ ಈ ಸಮಸ್ಯೆಗೆ ಸೂಕ್ತ ಪರಿಹಾರ ಮಾತ್ರ ಸಿಕ್ಕಿಲ್ಲ.
ಹಸುಗಳು ಪ್ಲಾಸ್ಟಿಕ್ ತಿನ್ನುವುದು ಅಪಾಯಕಾರಿ ಎಂದು ತಿಳಿದಿದ್ದರೂ, ನಾವು ಅವುಗಳನ್ನು ತಡೆಯಲು ಗಂಭೀರ ಪ್ರಯತ್ನ ಮಾಡಿಲ್ಲ. ಗೋವುಗಳು ಪ್ಲಾಸ್ಟಿಕ್ ತಿಂದರೆ ಅವುಗಳ ಗತಿ ಏನಾಗುತ್ತದೆ? ಇದರಿಂದ ಅವುಗಳಿಗೆ ಯಾವೆಲ್ಲಾ ತೊಂದರೆಗಳು ಉಂಟಾಗುತ್ತವೆ?
ಇಂದಿಗೂ ಎಷ್ಟೋ ಜಾನುವಾರುಗಳು ಪ್ಲಾಸ್ಟಿಕ್ ಎಂಬ ಮೌನ ವಿಷಕ್ಕೆ ಬಲಿಯಾಗುತ್ತಿವೆ. ಹೊಲ ಗದ್ದೆಗಳಲ್ಲಿ ಮೇಯಲು ಹೋದಾಗಲೋ ಅಥವಾ ರಸ್ತೆ ಬದಿಗಳಲ್ಲಿ ಅಡ್ಡಾಡುವಾಗಲೋ ಹಸಿವಿನಿಂದಲೋ ಅಥವಾ ಅರಿಯದೆಯೋ ಪ್ಲಾಸ್ಟಿಕ್ ಕವರ್ಗಳನ್ನು ತಿನ್ನುತ್ತವೆ. ಭಯಾನಕ ಸಂಗತಿಯೆಂದರೆ, ಹೀಗೆ ಪ್ಲಾಸ್ಟಿಕ್ ತಿಂದ ಜಾನುವಾರುಗಳು ಸತ್ತರೆ ಅವುಗಳ ದೇಹವನ್ನು ಕಾಗೆಯಾಗಲಿ, ಹದ್ದಾಗಲಿ ಮುಟ್ಟುವುದಿಲ್ಲ. ಏಕೆಂದರೆ ಆ ಪ್ಲಾಸ್ಟಿಕ್ ಜೀರ್ಣವಾಗದೆ ದೇಹದಲ್ಲಿ ಮಾರಕ ವಿಷವನ್ನು ಸೇರಿಸಿರುತ್ತದೆ.
ಹಸುಗಳಿಗೆ ಇದು ತಿನ್ನಬಾರದು ಎಂದು ಹೇಳಲು ಬರುವುದಿಲ್ಲ. ಆದರೆ ನಾವು ಬುದ್ಧಿವಂತ ಮನುಷ್ಯರಾಗಿ ನಮ್ಮ ಪ್ಲಾಸ್ಟಿಕ್ ಬಳಕೆಯನ್ನು ಮಿತಿಗೊಳಿಸುವ ಮೂಲಕ ಈ ದುರಂತಕ್ಕೆ ಕಡಿವಾಣ ಹಾಕಬಹುದು. ನಾವು ಸೇವಿಸಿದ ಆಹಾರದ ಪ್ಲಾಸ್ಟಿಕ್ ಕವರ್ಗಳನ್ನು ಹಾಗೆಯೇ ಎಲ್ಲೆಂದರಲ್ಲಿ ಎಸೆಯುವುದನ್ನು ನಿಲ್ಲಿಸಿದರೆ, ಅವು ಮುಗ್ಧ ಪ್ರಾಣಿಗಳ ಹೊಟ್ಟೆ ಸೇರುವುದನ್ನು ತಪ್ಪಿಸಬಹುದು.
ಮುಗ್ಧ ಗೋವುಗಳ ಹೊಟ್ಟೆಗೆ ಪ್ಲಾಸ್ಟಿಕ್ ಸೇರಿದರೆ ಏನಾಗುತ್ತದೆ??
ಪ್ಲಾಸ್ಟಿಕ್ ಎಂಬುದು ಜೀರ್ಣವಾಗದ ವಸ್ತು. ಅದು ಹೊಟ್ಟೆಯೊಳಗೆ ಸೇರಿದರೆ ಜಾನುವಾರುಗಳ ಸಾವಿಗೆ ಕಾರಣವಾಗುತ್ತದೆ. ಪ್ಲಾಸ್ಟಿಕ್ ತಿಂದು ಸಾಯುವ ಪ್ರಾಣಿಗಳಲ್ಲಿ ಹಸುಗಳ ಸಂಖ್ಯೆಯೇ ಅಧಿಕ. ಹಸುಗಳ ಬಾಯಿಯ ರಚನೆಯೇ ವಿಚಿತ್ರ. ಅವುಗಳಿಗೆ ತಾವು ತಿನ್ನುತ್ತಿರುವುದು ಏನು ಎಂದು ಸ್ಪಷ್ಟವಾಗಿ ತಿಳಿಯುವುದಿಲ್ಲ. ಆಹಾರವನ್ನು ಜಗಿಯುತ್ತಾ ತಿಂದರೂ, ಅವುಗಳ ತುಟಿಗಳು ಪ್ಲಾಸ್ಟಿಕ್ನಂತಹ ತ್ಯಾಜ್ಯವನ್ನು ಗುರುತಿಸುವಷ್ಟು ಸೂಕ್ಷ್ಮವಾಗಿರುವುದಿಲ್ಲ. ಹಾಗಾಗಿ ಅವು ಅರಿಯದೆ ಪ್ಲಾಸ್ಟಿಕ್ ಅನ್ನು ತಿಂದುಬಿಡುತ್ತವೆ.
ಇದನ್ನೂ ಓದಿ: ಪ್ರತಿದಿನ ಹಸುವಿಗೆ ಆಹಾರ ನೀಡುವುದರ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ರಹಸ್ಯ!
ಇದಲ್ಲದೆ, ಹಸುಗಳಿಗೆ ವಾಂತಿ ಮಾಡುವ ಸಹಜ ಪ್ರವೃತ್ತಿ ಇರುವುದಿಲ್ಲ. ಹಾಗಾಗಿ ಒಮ್ಮೆ ಹೊಟ್ಟೆಗೆ ಸೇರಿದ ಪ್ಲಾಸ್ಟಿಕ್ ಅಲ್ಲೇ ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ. ಇದರಿಂದ ಅವುಗಳಿಗೆ ಬೇರೆ ಆಹಾರವನ್ನು ತಿನ್ನಲು ಜಾಗವಿಲ್ಲದಂತಾಗುತ್ತದೆ. ಕೇವಲ ಪ್ಲಾಸ್ಟಿಕ್ ಮಾತ್ರವಲ್ಲ, ಸತ್ತ ಹಸುಗಳ ಹೊಟ್ಟೆಯಲ್ಲಿ ಮೊಳೆ, ಕಬ್ಬಿಣದ ಚೂರುಗಳಂತಹ ಹರಿತವಾದ ವಸ್ತುಗಳು ಕೂಡ ಪತ್ತೆಯಾಗಿವೆ. ಇಂತಹ ಅಪಾಯಕಾರಿ ವಸ್ತುಗಳು ಹಸುಗಳ ಹೊಟ್ಟೆ ಮತ್ತು ಕರುಳನ್ನು ಸೀಳಿ ತೀವ್ರ ನೋವು ಹಾಗೂ ಸಾವಿಗೆ ಕಾರಣವಾಗುತ್ತವೆ.
ಪ್ಲಾಸ್ಟಿಕ್ ಮಾಲಿನ್ಯ ಕೇವಲ ನಮ್ಮ ಭೂಮಿ ಮತ್ತು ನೀರಿನ ಆವಾಸಸ್ಥಾನಗಳನ್ನು ಹಾಳು ಮಾಡುವುದಲ್ಲ, ನಮ್ಮ ಪರಿಸರದ ಅಮೂಲ್ಯ ಜೀವಿಗಳಾದ ಗೋವುಗಳಿಗೂ ಇದು ಮಾರಕವಾಗಿದೆ. ಈ ಸಮಸ್ಯೆಯ ಗಂಭೀರತೆಯನ್ನು ನಾವು ಅರಿತುಕೊಳ್ಳಬೇಕು. ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ಕಸವನ್ನು ಸರಿಯಾಗಿ ವಿಲೇವಾರಿ ಮಾಡಲು ಮುಂದಾಗಬೇಕು. ಆಗ ಮಾತ್ರ ನಾವು ಈ ಮುಗ್ಧ ಜೀವಿಗಳನ್ನು ಉಳಿಸಲು ಮತ್ತು ಆರೋಗ್ಯಕರ ಪರಿಸರವನ್ನು ನಿರ್ಮಿಸಲು ಸಾಧ್ಯ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.