
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಮೂಲಕ ದಿಟ್ಟ ಸೇಡು ತೀರಿಸಿಕೊಂಡಿದೆ. ಪಿಓಕೆ ಮತ್ತು ಪಾಕಿಸ್ತಾನದಲ್ಲಿದ್ದ ಉಗ್ರರ 9 ನೆಲೆಗಳನ್ನು ಕ್ಷಿಪಣಿ ದಾಳಿಯ ಮೂಲಕ ಯಶಸ್ವಿಯಾಗಿ ಉಡಾಯಿಸಿದೆ. ಈ ಬಾರಿ ವಿಶೇಷವೆಂದರೆ, ಭಾರತೀಯ ಸೇನೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಬ್ಬರು ಮಹಿಳಾ ಸೇನಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಯಶಸ್ವಿ ಕಾರ್ಯಾಚರಣೆಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ (Wing Commander Vyomika Singh) ಮತ್ತು ಕರ್ನಲ್ ಸೋಫಿಯಾ ಖುರೇಷಿ (Colonel Sophia Quereshi) ಅವರು ಈ ಮಹತ್ವದ ಸುದ್ದಿಗೋಷ್ಠಿಯ ನೇತೃತ್ವ ವಹಿಸಿ, ದೇಶಕ್ಕೆ ಹೆಮ್ಮೆ ತಂದಿದ್ದಾರೆ.
‘ಆಪರೇಷನ್ ಸಿಂಧೂರ್’ ಬಗ್ಗೆ ಮಾಹಿತಿ ನೀಡಲು ಭಾರತೀಯ ಸೇನೆಯು ಇಬ್ಬರು ಮಹಿಳಾ ಅಧಿಕಾರಿಗಳನ್ನು ಮುಂಚೂಣಿಗೆ ತಂದಿರುವುದು ಪಾಕಿಸ್ತಾನಕ್ಕೆ ಮತ್ತೊಂದು ರೀತಿಯ ದಿಟ್ಟ ಉತ್ತರವಾಗಿದೆ. ಈ ನಡೆ, ಭಾರತೀಯ ಸೇನೆಯಲ್ಲಿ ಮಹಿಳೆಯರ ಸಾಮರ್ಥ್ಯ ಮತ್ತು ನಾಯಕತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ಇದನ್ನೂ ಓದಿ: ಅಲ್ಲಾ ನಮ್ಮನ್ನು ರಕ್ಷಿಸಲಿ ಎಂದು ಕಣ್ಣೀರಿಟ್ಟ ಪಾಕ್ ಸಂಸದ
ಇನ್ನೂ ಹೆಮ್ಮೆಯ ವಿಷಯವೆಂದರೆ, ಈ ಯಶಸ್ವಿ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ ಕರ್ನಲ್ ಸೋಫಿಯಾ ಖುರೇಷಿ ಅವರು ನಮ್ಮ ಹೆಮ್ಮೆಯ ಬೆಳಗಾವಿಯ ಸೊಸೆ!
ಹೌದು, ಕರ್ನಲ್ ಸೋಫಿಯಾ ಖುರೇಷಿ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದವರಾದ ತಾಜುದ್ದೀನ್ ಬಾಗೇವಾಡಿ ಅವರ ಪತ್ನಿ. ಸೋಫಿಯಾ ಅವರು ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ. ಅವರ ಪತಿ ತಾಜುದ್ದೀನ್ ಬಾಗೇವಾಡಿ ಕೂಡ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ದಿಟ್ಟ ದಂಪತಿಗಳು 2015ರಲ್ಲಿ ಪ್ರೀತಿಸಿ ವಿವಾಹವಾಗಿದ್ದಾರೆ. ಸದ್ಯಕ್ಕೆ ಸೋಫಿಯಾ ಅವರು ಜಮ್ಮುವಿನಲ್ಲಿ ಕರ್ನಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಅವರ ಪತಿ ತಾಜುದ್ದೀನ್ ಅವರು ಜಾನ್ಸಿಯಲ್ಲಿ ಕರ್ನಲ್ ಆಗಿ ದೇಶ ಸೇವೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ಸದ್ದು: ಸಿಎಂ ಸಿದ್ದರಾಮಯ್ಯ ಹಣೆಗೆ ‘ಸಿಂಧೂರ’ ಇಟ್ಟಿದ್ದು ಯಾರು?
ಮೂಲತಃ ಗುಜರಾತ್ನವರಾದ ಕರ್ನಲ್ ಸೋಫಿಯಾ ಖುರೇಷಿ ಅವರು 1981ರಲ್ಲಿ ವಡೋದರಾದಲ್ಲಿ ಜನಿಸಿದರು. ಅವರು ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸೋಫಿಯಾ ಅವರ ಅಜ್ಜ ಕೂಡ ಭಾರತೀಯ ಸೇನೆಯಲ್ಲಿದ್ದರು, ಮತ್ತು ಅವರ ತಂದೆ ಕೆಲವು ವರ್ಷಗಳ ಕಾಲ ಸೈನ್ಯದಲ್ಲಿ ಧಾರ್ಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 2016ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ಕವಾಯತಿನಲ್ಲಿ ಭಾರತೀಯ ತುಕಡಿಯನ್ನು ಮುನ್ನಡೆಸಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದರು. ಆ ಮೂಲಕ ಭಾರತೀಯ ಸೇನೆಯ ಮೊದಲ ಮಹಿಳಾ ತುಕಡಿ ಕಮಾಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅವರು 1999ರಲ್ಲಿ ಭಾರತೀಯ ಸೇನೆಗೆ ಸೇರಿದರು ಮತ್ತು ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದರು. ನಂತರ ಅವರು ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಸೋಫಿಯಾ ಅವರು 2006ರಲ್ಲಿ ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಮಿಲಿಟರಿ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು 2010ರಿಂದಲೂ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ಸಕ್ರಿಯರಾಗಿದ್ದಾರೆ. ಪಂಜಾಬ್ ಗಡಿಯಲ್ಲಿ ಆಪರೇಷನ್ ಪರಾಕ್ರಮ್ ಸಮಯದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಅವರಿಂದ ಪ್ರಶಂಸಾ ಪತ್ರವೂ ಲಭಿಸಿದೆ.
ಕರ್ನಲ್ ಸೋಫಿಯಾ ಖುರೇಷಿ ಅವರ ದಿಟ್ಟತನ, ಕರ್ತವ್ಯ ನಿಷ್ಠೆ ಮತ್ತು ರಾಷ್ಟ್ರ ಸೇವೆಗೆ ಸಲ್ಲಿಸುತ್ತಿರುವ ಕೊಡುಗೆ ನಿಜಕ್ಕೂ ಸ್ಫೂರ್ತಿದಾಯಕ. ಬೆಳಗಾವಿಯ ಸೊಸೆಯಾಗಿ ಅವರು ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಅವರ ಧೈರ್ಯ ಮತ್ತು ನಾಯಕತ್ವ ಭಾರತೀಯ ಸೇನೆಯಲ್ಲಿ ಮಹಿಳೆಯರ ಉನ್ನತ ಸ್ಥಾನವನ್ನು ಎತ್ತಿ ತೋರಿಸುತ್ತದೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.