- ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಅವರ ಮದುವೆ
- ಮಗಳು ಮತ್ತು ಅಳಿಯ ಕಳ್ಳರು ಎಂದು ತಂದೆಯ ಗಂಭೀರ ಆರೋಪ
- ಹಣದ ಆಸೆಗಾಗಿ ಮದುವೆ ನಡೆದಿರುವ ಶಂಕೆ ವ್ಯಕ್ತಪಡಿಸಿದ ತಂದೆ
ʻಬಿಗ್ ಬಾಸ್ ಕನ್ನಡ ಸೀಸನ್ 11ʼ(Bigg Boss Kannada)ರ ಫೈರ್ಬ್ರ್ಯಾಂಡ್ ಎಂದೇ ಖ್ಯಾತರಾಗಿದ್ದ ಚೈತ್ರಾ ಕುಂದಾಪುರ (Chaithra Kundapura) ಅವರು ಮೇ 9ರಂದು ತಮ್ಮ ಬಹುಕಾಲದ ಗೆಳೆಯ ಶ್ರೀಕಾಂತ್ ಕಶ್ಯಪ್ (Sri Kanth Kashyap) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾದ ಸಂತಸದಲ್ಲಿರುವ ಚೈತ್ರಾ ಕುಂದಾಪುರ ಅವರ ಮೇಲೆ ಇದೀಗ ಸ್ವಂತ ತಂದೆಯೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಹೌದು, ಚೈತ್ರಾ ಕುಂದಾಪುರ ತಂದೆ ಬಾಲಕೃಷ್ಣ ನಾಯ್ಕ್ (Balakrishna Naik) ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗ, “ನನ್ನ ಮಗಳು ದೊಡ್ಡ ಕಳ್ಳಿ. ಅವಳು ನನ್ನನ್ನು ಮದುವೆಗೆ ಆಹ್ವಾನಿಸಿಲ್ಲ. ಆ ಮದುವೆಯನ್ನು ನಾನು ಒಪ್ಪುವುದಿಲ್ಲ. ಚೈತ್ರಾ ಮತ್ತು ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಆಕೆಯ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ.
ಗೋವಿಂದ ಬಾಬು ಪೂಜಾರಿ ಪ್ರಕರಣದಲ್ಲೂ ಇವರು ಹಣ ಹಂಚಿಕೊಂಡಿದ್ದಾರೆ. ನನಗೆ ನನ್ನ ದೊಡ್ಡ ಮಗಳು ಮಾತ್ರ ಆಸರೆ. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥ. ಚೈತ್ರಾಳ ಮಾತು ಮತ್ತು ಕೃತಿಗಳಲ್ಲಿ ಯಾವುದೇ ಸಂಬಂಧವಿಲ್ಲ. ಆಕೆಗೆ ಯಾರೂ ದೊಡ್ಡ ಸ್ಥಾನಮಾನ ನೀಡಬೇಡಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರು ಹಿರಿಯರ ಸಮ್ಮುಖದಲ್ಲಿ ಕುಂದಾಪುರದಲ್ಲಿ ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ಕಶ್ಯಪ್ ಅವರ ವಿವಾಹವು ನೆರವೇರಿತ್ತು. ಆಪ್ತರು ಮತ್ತು ಸ್ನೇಹಿತರೆಲ್ಲರೂ ಈ ಶುಭ ಸಮಾರಂಭದಲ್ಲಿ ಭಾಗವಹಿಸಿದ್ದರು. ಆದರೆ, ಸ್ವಂತ ತಂದೆಯನ್ನೇ ಮದುವೆಗೆ ಆಹ್ವಾನಿಸದಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: ದೈವಗಳ ಕೆಂಗಣ್ಣಿಗೆ ಗುರಿಯಾಯಿತೇ ಕಾಂತಾರ 2! ರಾಕೇಶ್ ಪೂಜಾರಿ ಅವರ ಸಾವಿನ ಹಿಂದಿನ ಕರಾಳ ಸತ್ಯವೇನು?
ಬಾಲಕೃಷ್ಣ ನಾಯ್ಕ್ ಅವರು ತಮ್ಮ ಅಸಮಾಧಾನವನ್ನು ಮುಂದುವರೆಸಿ, ಚೈತ್ರಾ ಅವರು ಬಿಗ್ ಬಾಸ್ಗೆ ಹೋಗುವ ವಿಷಯವನ್ನು ಸಹ ತಮಗೆ ತಿಳಿಸಿರಲಿಲ್ಲ ಎಂದು ಹೇಳಿದ್ದಾರೆ. “ಚೈತ್ರಾ ಬಿಗ್ ಬಾಸ್ ಮನೆಗೆ ಹೋಗುವಾಗಲೂ ನನಗೆ ಹೇಳಲಿಲ್ಲ. ನನ್ನನ್ನು ಮನೆಯಲ್ಲಿ ಬಿಟ್ಟು ಅಮ್ಮ ಮತ್ತು ಮಗಳು ಬೀಗ ಹಾಕಿ ಹೋಗಿದ್ದರು” ಎಂದು ಅವರು ನೋವಿನಿಂದ ನುಡಿದಿದ್ದಾರೆ.
ಚೈತ್ರಾ ಕುಂದಾಪುರ ಅವರ ತಂದೆಯ ಈ ಗಂಭೀರ ಆರೋಪಗಳು ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಮಗಳ ಮದುವೆಯಾದ ಕೆಲವೇ ದಿನಗಳಲ್ಲಿ ತಂದೆಯೇ ಇಂತಹ ಆರೋಪಗಳನ್ನು ಮಾಡಿರುವುದು ಅನೇಕರನ್ನು ದಿಗ್ಭ್ರಮೆಗೊಳಿಸಿದೆ. ಈ ಆರೋಪಗಳಿಗೆ ಚೈತ್ರಾ ಕುಂದಾಪುರ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಈರುಳ್ಳಿ ಬೀಜದಿಂದ ಕೋಟಿ ಕೋಟಿ ಆದಾಯ ಗಳಿಸಿದ ಬೀದರ್ನ ರೈತ
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
