
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದು, ಇತ್ತೀಚೆಗೆ ದಿನಜಾಪುರದಲ್ಲಿ ಪ್ರಭಾವಿ ಹಿಂದೂ ನಾಯಕರಾದ 58 ವರ್ಷದ ಭಾವೇಶ್ ಚಂದ್ರ ರಾಯ್ ಅವರನ್ನು ಗುರುವಾರ ಅಪಹರಿಸಿ ನಿರ್ದಯವಾಗಿ ಕೊಲೆ ಮಾಡಲಾಗಿದೆ. ಈ ಘಟನೆಯ ಬಗ್ಗೆ ಭಾರತ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಭಾರತವು ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ ಎಂದು ತೀವ್ರವಾಗಿ ಖಂಡಿಸಿದೆ. ದಿನಜಾಪುರದಲ್ಲಿ ಪ್ರಮುಖ ಹಿಂದೂ ನಾಯಕ ಭಾವೇಶ್ ಚಂದ್ರ ರಾಯ್ ಅವರ ಅಪಹರಣ ಮತ್ತು ಭೀಕರ ಹತ್ಯೆಯು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಆಡಳಿತದಲ್ಲಿ ಹಿಂದೂಗಳ ಮೇಲಿನ ನಿರಂತರ ಹಿಂಸಾಚಾರದ ಮಾದರಿಯನ್ನು ತೋರಿಸುತ್ತದೆ ಎಂದು ಭಾರತ ಹೇಳಿದೆ.
ಬಾಂಗ್ಲಾದೇಶದ ಪೂಜಾ ಉದ್ಯಾಪನ್ ಪರಿಷತ್ನ ಬಿರಾಲ್ ಘಟಕದ ಉಪಾಧ್ಯಕ್ಷರಾಗಿದ್ದ 58 ವರ್ಷದ ಭಾವೇಶ್ ಚಂದ್ರ ರಾಯ್ ಅವರನ್ನು ಗುರುವಾರ ಸಂಜೆ ನಾಲ್ವರು ದುಷ್ಕರ್ಮಿಗಳು ಎರಡು ಮೋಟಾರ್ಸೈಕಲ್ಗಳಲ್ಲಿ ಬಂದು ಅವರ ಮನೆಯಿಂದ ಅಪಹರಿಸಿದರು. ಬಳಿಕ ಅವರನ್ನು ನರಬಾರಿ ಎಂಬ ಸ್ಥಳಕ್ಕೆ ಕರೆದೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ನಂತರ ಅವರ ಮನೆಯ ಬಳಿ ಬಿಟ್ಟು ಹೋದರು. ತೀವ್ರವಾಗಿ ಗಾಯಗೊಂಡಿದ್ದ ರಾಯ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಘಟನೆಯನ್ನು ಖಂಡಿಸಿದ್ದು, ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಯಾವುದೇ ನೆಪಗಳನ್ನು ಹೇಳದೆ ಹಿಂದೂಗಳು ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತರ ರಕ್ಷಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಹಿಂದಿನ ಇಂತಹ ಘಟನೆಗಳ ಅಪರಾಧಿಗಳು ಇನ್ನೂ ಮುಕ್ತವಾಗಿ ಓಡಾಡುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಾನು ಬಾಂಗ್ಲಾ ಪಿಎಂ ಮೊಹ್ಮದ್ ಯೂನುಸ್ ಅಭಿಮಾನಿ! ಡಿಕೆಶಿ
ಭಾರತವು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ವರದಿಗಳನ್ನು ಗಂಭೀರವಾಗಿ ಪರಿಗಣಿಸದಿರುವ ಧೋರಣೆಯನ್ನು ಟೀಕಿಸಿದೆ. ಬಾಂಗ್ಲಾದೇಶವು ಕೆಲವು ವರದಿಗಳನ್ನು ಸುಳ್ಳು ಸುದ್ದಿ ಎಂದು ತಳ್ಳಿಹಾಕಿದೆ. ಭಾರತವು ಅಲ್ಪಸಂಖ್ಯಾತರನ್ನು ರಕ್ಷಿಸುವ ಜವಾಬ್ದಾರಿಯನ್ನು ಬಾಂಗ್ಲಾದೇಶ ಸರ್ಕಾರಕ್ಕೆ ನೆನಪಿಸಿದ್ದು, ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ರಕ್ಷಣೆ ನೀಡಬೇಕೆಂದು ಆಗ್ರಹಿಸಿದೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.