
ಗಡಿಯಲ್ಲಿನ ಬಿಗುವಿನ ವಾತಾವರಣ ಇನ್ನೂ ಸಂಪೂರ್ಣವಾಗಿ ತಿಳಿಯಾಗಿಲ್ಲ. ಪಾಕಿಸ್ತಾನ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಸೇನೆಯು ರಜೆಯಲ್ಲಿದ್ದ ತನ್ನ ಯೋಧರಿಗೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಕರೆ ನೀಡಿದೆ. ಈ ಕರೆಗೆ ಓಗೊಟ್ಟು, ದೇಶದ ಮೂಲೆ ಮೂಲೆಗಳಿಂದ ರಜೆ ಅನುಭವಿಸುತ್ತಿದ್ದ ವೀರ ಯೋಧರು ಮತ್ತೆ ಗಡಿಯತ್ತ ಮುಖ ಮಾಡುತ್ತಿದ್ದಾರೆ.
ತಮ್ಮ ತಂಗಿಯ ಮದುವೆ, ವೃದ್ಧ ತಾಯಿಯ ಅನಾರೋಗ್ಯದಂತಹ ವೈಯಕ್ತಿಕ ಕಾರಣಗಳಿಗಾಗಿ ರಜೆ ಪಡೆದಿದ್ದ ಅನೇಕ ಯೋಧರು, ದೇಶದ ಕರೆ ಬಂದ ಕೂಡಲೇ ಹೆಮ್ಮೆಯಿಂದ ತಮ್ಮ ಕರ್ತವ್ಯಕ್ಕೆ ಮರಳುತ್ತಿದ್ದಾರೆ. ಆದರೆ, ಯುದ್ಧದ ಕಾರ್ಮೋಡಗಳು ಕವಿದಿರುವ ಈ ಸಂದರ್ಭದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳುಹಿಸುವಾಗ ಕುಟುಂಬದ ಸದಸ್ಯರ ಕಣ್ಣಂಚಿನಲ್ಲಿ ನೀರು ಜಿನುಗುವುದು ಸಹಜ.
ಅಂತಹ ಭಾವುಕ ಕ್ಷಣಗಳಿಗೆ ಸಾಕ್ಷಿಯಾದ ಕಥೆಯಿದು. ಕಲಬುರಗಿ ಮೂಲದ CRPF ಯೋಧ ಹಣಮಂತರಾಯ್ ಔಸೆ ಅವರು ಪತ್ನಿಯ ಹೆರಿಗೆಗಾಗಿ ರಜೆ ಮೇಲೆ ತಮ್ಮೂರಿಗೆ ಬಂದಿದ್ದರು. ಕೇವಲ ಒಂದು ವಾರದ ಹಿಂದೆಯಷ್ಟೇ ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೊಸ ಅತಿಥಿಯ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿತ್ತು. ಆದರೆ, ಭಾರತೀಯ ಸೇನೆಯಿಂದ ತುರ್ತು ಸೇವೆಗೆ ಹಾಜರಾಗುವಂತೆ ಕರೆ ಬಂದ ಕೂಡಲೇ ಹಣಮಂತರಾಯ್ ಅವರು ಮತ್ತೆ ಗಡಿಯತ್ತ ಪ್ರಯಾಣ ಬೆಳೆಸಲು ಸಿದ್ಧರಾದರು.
ಇದನ್ನೂ ಓದಿ: ಹುತಾತ್ಮ ಯೋಧ ಮುರಳಿ ನಾಯಕ್ ಕುಟುಂಬಕ್ಕೆ ₹75 ಲಕ್ಷ, 5 ಎಕರೆ ಜಮೀನು ನೀಡಿದ ಪವನ್ ಕಲ್ಯಾಣ್
“ನನಗೆ ಮಗು, ಮನೆ, ಕುಟುಂಬ ಎಲ್ಲಕ್ಕಿಂತ ದೇಶವೇ ಮೊದಲು. ನಾನು ಸೇನೆಗೆ ಸೇರಿದ ದಿನದಿಂದಲೂ ಇದೇ ನನ್ನ ವೇದವಾಕ್ಯ. ಹಾಗಾಗಿ, ದೇಶದ ಸೇವೆಗಾಗಿ ನಾನು ಹೊರಡುತ್ತಿದ್ದೇನೆ” ಎಂದು ದೃಢವಾದ ಧ್ವನಿಯಲ್ಲಿ ಯೋಧ ಹಣಮಂತರಾಯ್ ಹೇಳುತ್ತಾರೆ. ಅವರ ಪತ್ನಿ ಸ್ನೇಹಾ ಕೂಡಾ ಪತಿಯ ನಿರ್ಧಾರಕ್ಕೆ ಬೆಂಬಲ ಸೂಚಿಸುತ್ತಾರೆ. “ನನ್ನ ಗಂಡ ನಮ್ಮನ್ನು ಈ ಸ್ಥಿತಿಯಲ್ಲಿ ಬಿಟ್ಟು ಹೋಗುತ್ತಿದ್ದಾರೆಂದು ನನಗೆ ಬೇಸರವಿಲ್ಲ. ನನಗೆ ನನ್ನ ಗಂಡನ ಬಗ್ಗೆ ಹೆಮ್ಮೆ ಇದೆ” ಎಂದು ಅವರು ಗಟ್ಟಿಯಾಗಿ ನುಡಿಯುತ್ತಾರೆ.
ಹೆಂಡತಿ ಮತ್ತು ವಾರದ ಹಸುಗೂಸಿನ ಜೊತೆ ಅಮೂಲ್ಯವಾದ ಕ್ಷಣಗಳನ್ನು ಕಳೆಯಬೇಕೆಂಬ ಆಸೆಯಿದ್ದರೂ, ದೇಶದ ಕರೆಗೆ ಓಗೊಟ್ಟು ಹಣಮಂತರಾಯ್ ಅವರು ತಮ್ಮ ಮುದ್ದು ಮಗುವಿಗೆ ಮತ್ತು ಇತರ ಇಬ್ಬರು ಮಕ್ಕಳಿಗೆ ಸಿಹಿ ಮುತ್ತು ನೀಡಿ ಜಮ್ಮುವಿನತ್ತ ಪ್ರಯಾಣ ಬೆಳೆಸಿದ್ದಾರೆ. ಬಾಣಂತಿಯಾಗಿದ್ದ ಪತ್ನಿ ಸ್ನೇಹಾ ಅವರು ಭಾರವಾದ ಮನಸ್ಸಿನಿಂದಲೇ ಪತಿಯನ್ನು ನಗುತ್ತಾ ಕಳುಹಿಸಿಕೊಟ್ಟಿದ್ದಾರೆ.
ಹಣಮಂತರಾಯ್ ಅವರು ಕಾಶ್ಮೀರಕ್ಕೆ ತೆರಳುವ ಮುನ್ನ ಅವರ ಸ್ನೇಹಿತರ ಬಳಗವು ಇಡೀ ಕುಟುಂಬವನ್ನು ಸನ್ಮಾನಿಸಿ, ಯೋಧನ ದೇಶ ಸೇವೆಯನ್ನು ಗೌರವಿಸಿ ಶುಭ ಹಾರೈಸಿತು. ಹೆಂಡತಿ ಮತ್ತು ವಾರದ ಮಗುವನ್ನು ಬಿಟ್ಟು ಹೋಗುವ ಭಾವುಕ ಕ್ಷಣ ಒಂದು ಕಡೆಯಾದರೆ, ಯೋಧನ ಕರ್ತವ್ಯ ಪ್ರಜ್ಞೆಗೆ ಸ್ನೇಹಿತರು ಮತ್ತು ಗ್ರಾಮಸ್ಥರೆಲ್ಲರೂ ಸಲಾಂ ಹೊಡೆದರು. ಹಣಮಂತರಾಯ್ ಅವರ ಈ ತ್ಯಾಗ ಮತ್ತು ದೇಶಭಕ್ತಿ ನಿಜಕ್ಕೂ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ.
ಇದನ್ನೂ ಓದಿ: ಆಪರೇಷನ್ ಸಿಂದೂರ್ ಸಿನಿಮಾ ಘೋಷಣೆ! ನಿರ್ಮಾಪಕರಿಗೆ ಛೀಮಾರಿ
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.