ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಸೈಬರ್ ಅಪರಾಧಿಗಳು ಯುವಕನೊಬ್ಬನನ್ನು ಯಾಮಾರಿಸಿದ ಬೆಚ್ಚಿಬೀಳಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡೇಟಿಂಗ್ ಆ್ಯಪ್ನಲ್ಲಿ ಸೃಷ್ಟಿಸಿದ್ದ ನಕಲಿ AI ಯುವತಿಯ ಪ್ರೊಫೈಲ್ ನಂಬಿದ ಯುವಕ, ವಿಡಿಯೋ ಕಾಲ್ ವೇಳೆ ಬೆತ್ತಲೆಯಾಗಿದ್ದು, ಬಳಿಕ ಬ್ಲ್ಯಾಕ್ಮೇಲ್ಗೆ ಒಳಗಾಗಿ ಸುಮಾರು 1.5 ಲಕ್ಷ ರೂ. ಕಳೆದುಕೊಂಡಿದ್ದಾನೆ.
ಈಜಿಪುರ ಪ್ರದೇಶದಲ್ಲಿ ವಾಸವಾಗಿರುವ 26 ವರ್ಷದ ಯುವಕ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಕುರಿತು ಬೆಂಗಳೂರು ಕೇಂದ್ರ ವಿಭಾಗದ ಸೈಬರ್ ಅಪರಾಧ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಪೊಲೀಸರ ಮಾಹಿತಿ ಪ್ರಕಾರ, ಜನವರಿ 5ರಂದು ಯುವಕ ಡೇಟಿಂಗ್ ಆ್ಯಪ್ನಲ್ಲಿ ತನ್ನ ಪ್ರೊಫೈಲ್ ರಚಿಸಿದ್ದ ತಕ್ಷಣ ‘ಇಶಾನಿ’ ಎಂಬ ಹೆಸರಿನ ಯುವತಿಯಿಂದ ಸ್ನೇಹ ವಿನಂತಿ ಬಂದಿದೆ. ಪರಿಚಯ ಮುಂದುವರಿದಂತೆ ಇಬ್ಬರೂ ಖಾಸಗಿ ವಿಚಾರಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದು, ಬಳಿಕ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡು ಮಾತನಾಡುತ್ತಿದ್ದರು.
ಕೆಲ ದಿನಗಳ ನಂತರ ಯುವಕನಿಗೆ ವಿಡಿಯೋ ಕಾಲ್ ಬಂದಿದ್ದು, ಎದುರುಗಡೆ ಕಾಣಿಸಿಕೊಂಡ ಯುವತಿ ಬಟ್ಟೆ ಬಿಚ್ಚಿ ಬೆತ್ತಲೆಯಾಗಿದ್ದಾಳೆ. ಆಕೆ ಹೇಳಿದಂತೆ ಯುವಕನೂ ಬಟ್ಟೆ ತೆಗೆಯುತ್ತಿದ್ದಂತೆ, ಆ ದೃಶ್ಯಗಳನ್ನು ದಾಖಲಿಸಿಕೊಂಡಿರುವ ಸೈಬರ್ ವಂಚಕರು ನಂತರ ನಿಜಸ್ವರೂಪ ತೋರಿಸಿದ್ದಾರೆ.
ಇದನ್ನೂ ಓದಿ: 8 ವರ್ಷಗಳಿಂದ ಲೈಂಗಿಕ ಕ್ರಿಯೆಗೆ ನಿರಾಕರಣೆ: ಇಂದೋರ್ನಲ್ಲಿ ಪತ್ನಿ ಹತ್ಯೆ ಮಾಡಿದ ಪತಿ
ಯುವಕನ ಖಾಸಗಿ ವಿಡಿಯೋಗಳನ್ನು ವಾಟ್ಸ್ಯಾಪ್ ಮೂಲಕ ಕಳುಹಿಸಿ, “ಇವುಗಳನ್ನು ನಿನ್ನ ಸ್ನೇಹಿತರು, ಕುಟುಂಬದವರಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತೇವೆ” ಎಂದು ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡ ಯುವಕ ಮೊದಲಿಗೆ 60 ಸಾವಿರ ರೂ. ಹಾಗೂ ನಂತರ ಮತ್ತಷ್ಟು 93 ಸಾವಿರ ರೂ. ಹಣವನ್ನು ಅವರು ಸೂಚಿಸಿದ ಖಾತೆಗೆ ವರ್ಗಾಯಿಸಿದ್ದಾನೆ.
ಆದರೂ ಹಣದ ಬೇಡಿಕೆ ನಿಲ್ಲದ ಕಾರಣ ಯುವಕ ತಕ್ಷಣ ಸೈಬರ್ ಅಪರಾಧ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ, ಡೇಟಿಂಗ್ ಆ್ಯಪ್ನಲ್ಲಿದ್ದ ಯುವತಿಯ ಪ್ರೊಫೈಲ್ ಸಂಪೂರ್ಣವಾಗಿ AI ಮೂಲಕ ಸೃಷ್ಟಿಸಲ್ಪಟ್ಟಿದ್ದು, ವಿಡಿಯೋ ಕಾಲ್ನಲ್ಲಿ ಕಾಣಿಸಿಕೊಂಡ ಯುವತಿಯೂ ಕೃತಕ ಬುದ್ಧಿಮತ್ತೆಯಿಂದ ನಿರ್ಮಿತವಾಗಿದ್ದಾಳೆ ಎಂಬುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಈ ಹಿಂದೆ ಇದೇ ರೀತಿಯ AI ಆಧಾರಿತ ಹನಿಟ್ರ್ಯಾಪ್ ಪ್ರಕರಣಗಳ ಜೊತೆ ಸಂಪರ್ಕವಿದೆಯೇ ಎಂಬುದನ್ನು ತನಿಖೆ ಮಾಡುತ್ತಿದ್ದಾರೆ. ಸಾರ್ವಜನಿಕರು ಡೇಟಿಂಗ್ ಆ್ಯಪ್ಗಳಲ್ಲಿ ಅಪರಿಚಿತರೊಂದಿಗೆ ಖಾಸಗಿ ವಿಡಿಯೋ ಕರೆಗಳಲ್ಲಿ ತೊಡಗುವಾಗ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಶ್ರೀ ರಾಮ ಅವರು ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ, ಟ್ರೆಂಡಿಂಗ್ ಕಥೆಗಳು ಹಾಗೂ ಅವುಗಳ ವಿಶ್ಲೇಷಣೆಯನ್ನು ನಿಖರವಾಗಿ ಓದುಗರಿಗೆ ತಲುಪಿಸುವಲ್ಲಿ ಅವರಿಗೆ ವಿಶೇಷ ಪರಿಣತಿ ಇದೆ. ರಾಜಕೀಯ ಸೇರಿದಂತೆ ಹಲವು ವಿಷಯಗಳಿಂದ ಸುದ್ದಿ ಸಂಗ್ರಹಣೆ, ವರದಿಗಾರಿಕೆ ಮತ್ತು ಸಂದರ್ಶನಗಳಲ್ಲಿ ಶ್ರೀ ರಾಮ ಉತ್ತಮ ನೈಪುಣ್ಯ ಪ್ರದರ್ಶಿಸಿದ್ದಾರೆ.
