
- ಜಪಾನಿನ ರಿಯೋ ಟಾಟ್ಸುಕಿ ಅವರು ಜುಲೈ 5, 2025ರಂದು ಭೀಕರ ಸಾಗರ ವಿಪತ್ತು ಭವಿಷ್ಯ ನುಡಿದಿದ್ದಾರೆ
- ಕೋಬ್ ಭೂಕಂಪ, 2011 ಸುನಾಮಿ, ಮತ್ತು ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಅವರ ಹಿಂದಿನ ಭವಿಷ್ಯವಾಣಿಗಳು ನಿಜವಾಗಿವೆ
- ಜುಲೈ 5, ಬೆಳಗ್ಗೆ 4.18ಕ್ಕೆ ಜಪಾನ್-ಫಿಲಿಪೈನ್ಸ್ ನಡುವೆ ಭೀಕರ ಘಟನೆ
ಪ್ರಪಂಚದಾದ್ಯಂತ ಬಾಬಾ ವಂಗಾ (Baba Vanga) ಅವರ ಭವಿಷ್ಯವಾಣಿಗಳು ಹೇಗೆ ಅಚ್ಚರಿ ಮೂಡಿಸುತ್ತವೆಯೋ, ಅದೇ ರೀತಿ ಜಪಾನ್ನಲ್ಲಿ ರಿಯೋ ಟಾಟ್ಸುಕಿ ಎಂಬ ಮಂಗಾ ಕಲಾವಿದೆ ತಮ್ಮ ನಿಖರ ಭವಿಷ್ಯವಾಣಿಗಳಿಂದ ಭಾರೀ ಹೆಸರುವಾಸಿಯಾಗಿದ್ದಾರೆ. 1995ರ ಕೋಬ್ ಭೂಕಂಪ ಮತ್ತು 2011ರ ಸುನಾಮಿಯಂತಹ ಭೀಕರ ವಿಪತ್ತುಗಳನ್ನು ಮೊದಲೇ ನುಡಿದಿದ್ದ ರಿಯೋ ಟಾಟ್ಸುಕಿ, ಈಗ ಮತ್ತೊಂದು ಭೀಕರ ಭವಿಷ್ಯವಾಣಿಯೊಂದಿಗೆ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದ್ದಾರೆ. ಅವರ ಪ್ರಕಾರ, ಜುಲೈ 5, 2025 ರಂದು ಬೆಳಗ್ಗೆ 4.18ಕ್ಕೆ ಭೂಮಿಯನ್ನೇ ನಡುಗಿಸುವಂತಹ ಮಹಾ ವಿಪತ್ತು ಸಂಭವಿಸಲಿದೆಯಂತೆ!
ಜಪಾನಿನ ‘ಬಾಬಾ ವಂಗಾ’ ಎಂದೇ ಖ್ಯಾತಿಯಾಗಿರುವ ರಿಯೋ ಟಾಟ್ಸುಕಿ ಅವರು ತಮ್ಮ ‘ದಿ ಫ್ಯೂಚರ್ ಐ ಸೀ’ (The Future I See) ಎಂಬ ಮಂಗಾ ಪುಸ್ತಕದಲ್ಲಿ ಈ ಭವಿಷ್ಯವನ್ನು ನುಡಿದಿದ್ದಾರೆ. ಜುಲೈ 5ರಂದು ಜಪಾನ್ ಮತ್ತು ಕೆಲವು ನೆರೆಯ ದೇಶಗಳಲ್ಲಿ ದೊಡ್ಡ ವಿಪತ್ತು ಸಂಭವಿಸಬಹುದು. ಈ ವಿಪತ್ತು ವ್ಯಾಪಕ ವಿನಾಶಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ. ಈ ಭವಿಷ್ಯವಾಣಿಯು ಪೂರ್ವ ಏಷ್ಯಾದಲ್ಲಿ ತೀವ್ರ ಕಳವಳವನ್ನುಂಟು ಮಾಡಿದ್ದು, ಹಾಂಗ್ ಕಾಂಗ್, ತೈವಾನ್ ಮತ್ತು ಚೀನಾದಿಂದ ಜಪಾನ್ಗೆ ಬರುವ ಪ್ರಯಾಣಿಕರ ಸಂಖ್ಯೆಯಲ್ಲಿ 50-83% ರಷ್ಟು ತೀವ್ರ ಕುಸಿತ ಕಂಡಿದೆ. ಕೆಲವು ವಿಮಾನಯಾನ ಸಂಸ್ಥೆಗಳು ಜುಲೈನಲ್ಲಿ ನಿಗದಿಯಾಗಿದ್ದ ವಿಮಾನಗಳನ್ನೇ ರದ್ದುಗೊಳಿಸಿವೆ.
ಏನು ಹೇಳುತ್ತದೆ ಟಾಟ್ಸುಕಿ ಅವರ ಭವಿಷ್ಯವಾಣಿ?
ಟಾಟ್ಸುಕಿ ಅವರ ಪುಸ್ತಕದಲ್ಲಿ ಸಮುದ್ರ ಕುದಿಯುತ್ತಿರುವ ಒಂದು ಚಿತ್ರವನ್ನು ಚಿತ್ರಿಸಲಾಗಿದೆ. ತಜ್ಞರು ಇದನ್ನು ನೀರೊಳಗಿನ ಜ್ವಾಲಾಮುಖಿ ಸ್ಫೋಟ ಅಥವಾ ಭೀಕರ ಭೂಕಂಪವೆಂದು ವ್ಯಾಖ್ಯಾನಿಸಿದ್ದಾರೆ. ಅವರ ಭವಿಷ್ಯವಾಣಿಯ ಪ್ರಕಾರ, ಜುಲೈ 5 ರಂದು ಬೆಳಗ್ಗೆ 4.18ಕ್ಕೆ ಜಪಾನ್ ಮತ್ತು ಫಿಲಿಪೈನ್ಸ್ ನಡುವಿನ ಸಾಗರ ತಳದಲ್ಲಿ ಭೀಕರ ವಿಪತ್ತು ಸಂಭವಿಸಲಿದೆ. ಇದು 2011ರಲ್ಲಿ ಸಂಭವಿಸಿದ ಸುನಾಮಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿರಲಿದೆ ಎಂದು ಅಂದಾಜಿಸಲಾಗಿದೆ. ಈ ಭವಿಷ್ಯವಾಣಿ ಇಡೀ ಜಗತ್ತಿನಲ್ಲಿ ದೊಡ್ಡ ಭೀತಿಯನ್ನುಂಟು ಮಾಡಿದೆ.
ಆದರೆ, ಜಪಾನ್ ಸರ್ಕಾರವು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಶಾಂತವಾಗಿರುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಮಿಯಾಗಿ ಪ್ರಾಂತ್ಯದ ಗವರ್ನರ್ ಯೋಶಿಹಿರೊ ಮುರೈ ಅವರು, ಆಧಾರರಹಿತ ವದಂತಿಗಳಿಂದ ಆತಂಕಗೊಳ್ಳದಂತೆ ನಾಗರಿಕರಲ್ಲಿ ಕೋರಿಕೊಂಡಿದ್ದಾರೆ. ಸರ್ಕಾರ ಮತ್ತು ವೈಜ್ಞಾನಿಕ ತಜ್ಞರು ಟಾಟ್ಸುಕಿ ಅವರ ಭವಿಷ್ಯವಾಣಿ ನಿಜವಾಗುವ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.
ರಿಯೋ ಟಾಟ್ಸುಕಿ: ಜಪಾನಿನ ಬಾಬಾ ವಂಗಾ! (Baba Vanga)
ರಿಯೋ ಟಾಟ್ಸುಕಿ ಅವರನ್ನು ‘ಜಪಾನಿನ ಬಾಬಾ ವಂಗಾ’ ಎಂದು ಕರೆಯುವುದಕ್ಕೆ ಬಲವಾದ ಕಾರಣಗಳಿವೆ. ಕನಸಿನಲ್ಲಿ ತಾನು ಕಂಡದ್ದೆಲ್ಲವೂ ನಿಜವಾಗುತ್ತದೆ ಎಂದು ಟಾಟ್ಸುಕಿ ಹೇಳುತ್ತಾರೆ. ರಾಜಕುಮಾರಿ ಡಯಾನಾ ಅವರ ಮರಣ, ಗಾಯಕ ಫ್ರೆಡ್ಡಿ ಮರ್ಕ್ಯುರಿ ಅವರ ನಿಧನ – ಇಂತಹ ಹಲವು ಘಟನೆಗಳ ಬಗ್ಗೆ ಅವರು ನುಡಿದ ಭವಿಷ್ಯಗಳು ನಿಜವಾಗಿವೆ. ಅಷ್ಟೇ ಅಲ್ಲ, 1999ರಲ್ಲಿ ತಮ್ಮ ಪುಸ್ತಕದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆಯೂ ಅವರು ಭವಿಷ್ಯ ನುಡಿದಿದ್ದರು. ಇದು 2020ರಲ್ಲಿ ನಿಜವಾಗಿದೆ. ಇಷ್ಟೇ ಅಲ್ಲದೆ, ಈ ಕೊರೊನಾ ಮಾರಕ ರೋಗವು 2030ರಲ್ಲಿ ಮತ್ತೊಮ್ಮೆ ಬರಲಿದ್ದು, ಈ ವೇಳೆ ಜಗತ್ತಿನಲ್ಲಿ ಭೀಕರ ವಿನಾಶ ಉಂಟಾಗಲಿದೆ ಎಂದೂ ಅವರು ಭವಿಷ್ಯ ನುಡಿದಿದ್ದಾರೆ.
ಬಲ್ಗೇರಿಯಾದ ಬಾಬಾ ವಂಗಾ (ವಾಂಜೆಲಿಯಾ ಪಾಂಡೇವಾ ಸುರ್ಚೆವಾ) ಅವರಂತೆಯೇ, ರಿಯೋ ಟಾಟ್ಸುಕಿ ಅವರ ಭವಿಷ್ಯವಾಣಿಗಳು ಜನರಲ್ಲಿ ಅಚ್ಚರಿ ಮತ್ತು ಆತಂಕ ಎರಡನ್ನೂ ಮೂಡಿಸುತ್ತಿವೆ. ಈ ಜುಲೈ 5ರ ಭವಿಷ್ಯ ನಿಜವಾಗುತ್ತದೆಯೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ದೇಹದ ಈ ಭಾಗದ ಮೇಲೆ ಹಲ್ಲಿ ಬಿದ್ದರೆ ಶಾಕ್ ಆಗಬೇಡಿ: ರಾತ್ರೋರಾತ್ರಿ ಕೋಟ್ಯಾಧಿಪತಿಯಾಗೋದು ಪಕ್ಕಾ!
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.