
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕರನ್ನು ಗುರಿಯಾಗಿಸಿ ನಡೆದ ಹೇಯ ಕೃತ್ಯಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಭಯೋತ್ಪಾದಕ ದಾಳಿಯಲ್ಲಿ ಹಿಂದೂ ಯಾತ್ರಿಗಳನ್ನು ಬಲಿ ತೆಗೆದುಕೊಳ್ಳಲಾಗಿದ್ದು, ಘಟನೆಯನ್ನು ಖಂಡಿಸಿ ಹಲವು ಗಣ್ಯರು ತಮ್ಮ ನೋವು ಮತ್ತು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಇದೀಗ ಬಾಲಿವುಡ್ನ ಖ್ಯಾತ ಗಾಯಕ ಸಲೀಮ್ ಮರ್ಚೆಂಟ್ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ತಮ್ಮ ವಿಡಿಯೋ ಸಂದೇಶದಲ್ಲಿ ಮಾತನಾಡಿದ ಸಲೀಮ್ ಮರ್ಚೆಂಟ್, “ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕಡಿಮೆಯಾಗುತ್ತಿದೆ ಎನ್ನುವಾಗಲೇ ಇಂತಹ ಭೀಕರ ದಾಳಿ ನಡೆದಿದೆ. ನನ್ನ ಹಿಂದೂ ಸಹೋದರ ಸಹೋದರಿಯರ ಮೇಲೆ ಈ ರೀತಿಯ ದಾಳಿ ನಡೆಯುತ್ತಿರುವುದನ್ನು ನೋಡಲಾಗುತ್ತಿಲ್ಲ. ಒಬ್ಬ ಮುಸ್ಲಿಂ ಆಗಿ ನನಗೆ ನಾಚಿಕೆಯಾಗುತ್ತಿದೆ” ಎಂದು ತಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಹಿಂದೂಗಳೇ ಗುರಿಯಾಗಿದ್ದಾರೆಯೇ?
ಪಹಲ್ಗಾಮ್ನಲ್ಲಿ ಅಮಾಯಕರನ್ನು ಕೇವಲ ಅವರು ಹಿಂದೂಗಳಾಗಿದ್ದ ಕಾರಣಕ್ಕೆ ಗುರಿಯಾಗಿಸಿ ಹತ್ಯೆ ಮಾಡಲಾಗಿದೆ ಎಂಬ ವರದಿಗಳು ಕೇಳಿಬರುತ್ತಿವೆ. ಈ ಕುರಿತು ಮಾತನಾಡಿದ ಸಲೀಮ್ ಮರ್ಚೆಂಟ್, “ಈ ದಾಳಿ ಸಂಘಟಿಸಿದವರು ಮುಸ್ಲಿಮರಲ್ಲ, ಅವರು ಭಯೋತ್ಪಾದಕರು. ಇಸ್ಲಾಂ ಎಂದಿಗೂ ಇಂತಹ ಕೃತ್ಯಗಳನ್ನು ಬೆಂಬಲಿಸುವುದಿಲ್ಲ. ಪವಿತ್ರ ಕುರಾನ್ನ ಸೂರಾ ಅಲ್ ಬಖ್ರಾಹ್ನ 256ನೇ ಅಧ್ಯಾಯದಲ್ಲಿ ‘ಧರ್ಮದಲ್ಲಿ ಯಾವುದೇ ಬಲವಂತವಿಲ್ಲ’ ಎಂದು ಸ್ಪಷ್ಟವಾಗಿ ಹೇಳಲಾಗಿದೆ” ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಂ ಎಂದರೂ ಬಿಡದೆ, ಕುರಾನ್ ಕೊಟ್ಟು ಪ್ಯಾಂಟ್ ಬಿಚ್ಚಿಸಿದರು!
ನೋವು ಮತ್ತು ಆಕ್ರೋಶ!
“ಕಳೆದ 2-3 ವರ್ಷಗಳಿಂದ ಕಾಶ್ಮೀರದ ಜನರು ನಿಧಾನವಾಗಿ ಸಹಜ ಜೀವನಕ್ಕೆ ಮರಳುತ್ತಿದ್ದರು. ಆದರೆ ಈ ದಾಳಿಯಿಂದ ಪರಿಸ್ಥಿತಿ ಮತ್ತೆ ಹದಗೆಟ್ಟಿದೆ. ಅಮಾಯಕ ಹಿಂದೂ ಸಹೋದರ ಸಹೋದರಿಯರನ್ನು ಕೇವಲ ಹಿಂದೂಗಳಾಗಿದ್ದ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಇದನ್ನು ನೋಡುವಾಗ ಒಬ್ಬ ಮುಸ್ಲಿಂ ಆಗಿ ನನಗೆ ತೀವ್ರ ನಾಚಿಕೆಯಾಗುತ್ತಿದೆ. ಈ ಹಿಂಸಾಚಾರ ಯಾವಾಗ ಕೊನೆಗೊಳ್ಳುತ್ತದೆಯೋ ತಿಳಿಯುತ್ತಿಲ್ಲ” ಎಂದು ಸಲೀಮ್ ಮರ್ಚೆಂಟ್ ತಮ್ಮ ಆತಂಕ ಮತ್ತು ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಮೃತರ ಕುಟುಂಬಕ್ಕೆ ಸಂತಾಪ
ತಮ್ಮ ವಿಡಿಯೋದ ಕೊನೆಯಲ್ಲಿ ಸಲೀಮ್ ಮರ್ಚೆಂಟ್ ಮಡಿದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. “ತಲೆಬಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಡಿದವರ ಕುಟುಂಬಕ್ಕೆ ಭಗವಂತ ಧೈರ್ಯ ಮತ್ತು ಶಕ್ತಿ ನೀಡಲಿ. ಈ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ. ಓಂ ಶಾಂತಿ” ಎಂದು ಹೇಳಿದ್ದಾರೆ. ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.
ಹಿಂದೂಗಳ ಮೇಲಿನ ದಾಳಿಗಳು: ಆತಂಕ
ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ನಡೆಸಲಾದ ಈ ದಾಳಿ, ಆರ್ಟಿಕಲ್ 370 ರದ್ದತಿಯ ನಂತರ ನಡೆದ ಅತೀ ದೊಡ್ಡ ದಾಳಿ ಎಂದು ಹೇಳಲಾಗುತ್ತಿದೆ. ದೇಶದ ಹಲವೆಡೆ ವ್ಯವಸ್ಥಿತವಾಗಿ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಕಾಶ್ಮೀರದಲ್ಲಿ ಉಗ್ರರ ದಾಳಿಗಳ ಮೂಲಕ ಮತ್ತು ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದ ಮೂಲಕ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಹಲವರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.