
ಜಗತ್ತಿನ ಹಲವು ದೇಶಗಳಲ್ಲಿ ಮಕ್ಕಳ ಜನನ ಪ್ರಮಾಣ ಕಡಿಮೆಯಾಗುತ್ತಿದ್ದು, ಅಮೇರಿಕಾ ಕೂಡಾ ಅವುಗಳಲ್ಲಿ ಒಂದು. ಈ ಸಮಸ್ಯೆಯನ್ನು ಪರಿಹರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸರ್ಕಾರವು ಜನರನ್ನು ಮದುವೆಯಾಗಲು ಮತ್ತು ಹೆಚ್ಚು ಮಕ್ಕಳನ್ನು ಹೆರಲು ಪ್ರೋತ್ಸಾಹಿಸುತ್ತಿದೆ.
ಇತ್ತೀಚೆಗೆ ಎರಡನೇ ಬಾರಿಗೆ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಅಮೆರಿಕನ್ನರು ಮದುವೆಯಾಗಿ ಹೆಚ್ಚು ಮಕ್ಕಳನ್ನು ಹೊಂದುವಂತೆ ಪ್ರೋತ್ಸಾಹಿಸಲು ಹಲವಾರು ಯೋಜನೆಗಳನ್ನು ಪರಿಶೀಲಿಸುತ್ತಿದೆ. ಇದಕ್ಕಾಗಿ, ವೈಟ್ ಹೌಸ್ನ ಸಹಾಯಕರು ನೀತಿ ತಜ್ಞರು ಮತ್ತು ಸಂಪ್ರದಾಯವಾದಿ ಗುಂಪುಗಳೊಂದಿಗೆ ಸಭೆಗಳನ್ನು ನಡೆಸಿದ್ದಾರೆ. ಈ ಗುಂಪುಗಳು ‘ಪ್ರೊನೇಟಲಿಸ್ಟ್’ ಆಂದೋಲನಕ್ಕೆ ಸಂಬಂಧಿಸಿವೆ. ಈ ಆಂದೋಲನವು ಕುಟುಂಬವನ್ನು ಬೆಂಬಲಿಸುವ ಮತ್ತು ಜನಸಂಖ್ಯೆಯ ಬೆಳವಣಿಗೆಯನ್ನು ಉತ್ತೇಜಿಸುವ ಸೈದ್ಧಾಂತಿಕ ಚಳುವಳಿಯಾಗಿದೆ.
ವರದಿಗಳ ಪ್ರಕಾರ, ಅಮೆರಿಕಾದ ಸರ್ಕಾರವು ಜನನ ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನವಾಗಿ ಮಗು ಜನಿಸಿದ ತಾಯಿಗೆ 5,000 ಅಮೆರಿಕನ್ ಡಾಲರ್ಗಳಿಗಿಂತಲೂ ಅಧಿಕ (ಸುಮಾರು ₹4.25 ಲಕ್ಷ) ‘ಬೇಬಿ ಬೋನಸ್’ ನೀಡುವ ಕುರಿತು ಗಂಭೀರವಾಗಿ ಪರಿಗಣಿಸುತ್ತಿದೆ. ಇದರ ಜೊತೆಗೆ, ಮಗು ಜನಿಸಿದರೆ ತೆರಿಗೆ ವಿನಾಯಿತಿಗಳನ್ನು ನೀಡುವುದು ಮತ್ತು ಮಹಿಳೆಯರಿಗೆ ಅವರ ಅಂಡೋತ್ಪತ್ತಿ ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯದ ಬಗ್ಗೆ ತಿಳಿವಳಿಕೆ ನೀಡಲು ಮುಟ್ಟಿನ ಚಕ್ರದ ಶಿಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತೂ ಚಿಂತನೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಪೃಥ್ವಿ ಭಟ್ ಮದುವೆ ವಿವಾದ: ತಂದೆಯ ಆರೋಪಕ್ಕೆ ಮಗಳ ಸ್ಪಷ್ಟನೆ!
ಅಮೆರಿಕಾದ ಪ್ರತಿಷ್ಠಿತ ಫುಲ್ಬ್ರೈಟ್ ವಿದ್ಯಾರ್ಥಿವೇತನ ಕಾರ್ಯಕ್ರಮದಲ್ಲಿ, ವಿವಾಹಿತರು ಅಥವಾ ಮಕ್ಕಳಿರುವ ಅಭ್ಯರ್ಥಿಗಳಿಗೆ ಶೇ.30 ರಷ್ಟು ಸ್ಥಾನಗಳನ್ನು ಮೀಸಲಿಡುವ ಪ್ರಸ್ತಾಪವನ್ನು ಸರ್ಕಾರವು ಪರಿಶೀಲಿಸುತ್ತಿದೆ. ಈ ಕ್ರಮವು, ಅಮೆರಿಕದ ಅತ್ಯಂತ ಗೌರವಾನ್ವಿತ ಶೈಕ್ಷಣಿಕ ಫೆಲೋಶಿಪ್ಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಒಂದು ಮಹತ್ವದ ಬದಲಾವಣೆಯಾಗಲಿದೆ.
ಈ ಯೋಜನೆಯು, ವಿದ್ಯಾರ್ಥಿ ದೆಸೆಯಲ್ಲಿಯೇ ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದುವುದಕ್ಕೂ, ಅಥವಾ ಮದುವೆ ಹಾಗೂ ಮಕ್ಕಳಾದ ನಂತರ ಉನ್ನತ ವ್ಯಾಸಂಗವನ್ನು ಮುಂದುವರಿಸುವುದಕ್ಕೂ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ. ಅಮೆರಿಕಾದಲ್ಲಿ ಜನನ ಪ್ರಮಾಣವು 1990 ರ ದಶಕದಿಂದಲೂ ಸ್ಥಿರವಾಗಿ ಕುಸಿಯುತ್ತಿದೆ. ಜಾಗತಿಕವಾಗಿ ಅತ್ಯಂತ ಶ್ರೀಮಂತ ರಾಷ್ಟ್ರವೆಂದು ಪರಿಗಣಿಸಲ್ಪಟ್ಟಿರುವ ಅಮೆರಿಕಾದಲ್ಲಿ, 2023 ರಲ್ಲಿ ಪ್ರತಿ ಮಹಿಳೆಗೆ ಸರಾಸರಿ 1.62 ಮಕ್ಕಳ ಜನನ ಪ್ರಮಾಣ ದಾಖಲಾಗಿದೆ ಎಂದು CDC ವರದಿ ಮಾಡಿದೆ.
ಯಾವುದೇ ದೇಶವು ತನ್ನ ಜನಸಂಖ್ಯೆಯನ್ನು ಪ್ರಸ್ತುತ ಮಟ್ಟದಲ್ಲಿ ಕಾಪಾಡಿಕೊಳ್ಳಲು ಪ್ರತಿ ಮಹಿಳೆಗೆ ಕನಿಷ್ಠ 2.1 ಮಕ್ಕಳ ಜನನ ಪ್ರಮಾಣದ ಅಗತ್ಯವಿದೆ. ಆದಾಗ್ಯೂ, ಹೆಚ್ಚಿನ ಜೀವನ ವೆಚ್ಚವನ್ನು ಸರಿದೂಗಿಸಲು ಅಮೆರಿಕಾದಂತಹ ಶ್ರೀಮಂತ ರಾಷ್ಟ್ರಗಳ ಮಹಿಳೆಯರು ಸಾಮಾನ್ಯವಾಗಿ ಒಂದೇ ಮಗುವಿಗೆ ಸೀಮಿತವಾಗುತ್ತಿದ್ದಾರೆ. ಈ ಪ್ರವೃತ್ತಿಯಿಂದಾಗಿ, ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಜನನ ಪ್ರಮಾಣದಲ್ಲಿ ಗಣನೀಯ ಇಳಿಕೆಯನ್ನು ಎದುರಿಸುತ್ತಿವೆ.
ಇದನ್ನೂ ಓದಿ: ಇರುವೆಗಳು ಕಟ್ಟಿದ ಹಿಮಾಚಲದ ನಿಗೂಢ ಚಂಡಿ ದೇಗುಲ
ತಜ್ಞರ ಅಭಿಪ್ರಾಯದ ಪ್ರಕಾರ, ಈ ಪರಿಸ್ಥಿತಿಗೆ ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳು ಪ್ರಮುಖ ಕಾರಣವಾಗಿವೆ. ಶ್ರೀಮಂತ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ, ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಹೆಚ್ಚುತ್ತಿರುವ ಭಾಗವಹಿಸುವಿಕೆ ಮತ್ತು ಸಾಮಾಜಿಕ ಮೌಲ್ಯಗಳಲ್ಲಿನ ಬದಲಾವಣೆಗಳು ಈ ಸಮಸ್ಯೆಗೆ ಕಾರಣವಾಗಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ‘ಬೇಬಿ ಬೋನಸ್’ ಯೋಜನೆಯು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಅಮೆರಿಕಾದಂತಹ ಶ್ರೀಮಂತ ರಾಷ್ಟ್ರಗಳು ಮಕ್ಕಳ ಭವಿಷ್ಯಕ್ಕಾಗಿ ಯಾವುದೇ ಮಹತ್ವದ ಯೋಜನೆಗಳನ್ನು ಘೋಷಿಸದೇ, ಮಗುವನ್ನು ಹೆತ್ತ ತಾಯಿಗೆ ಕೇವಲ 5000 ಡಾಲರ್ಗಳನ್ನು ನೀಡುವುದು ಅತ್ಯಲ್ಪ ಮೊತ್ತವಾಗಿದೆ ಎಂದು ಕೆಲವರು ಟೀಕಿಸಿದ್ದಾರೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.